Saturday, September 5, 2020

ಭಾಮಿನಿ

                                                                                                   (ಚಿತ್ರಕೃಪೆ: ಅಂತರ್ಜಾಲ)

ಕುಸುಮರಾಶಿಯೊಳಂದದಿಂದಲಿ-
ಯೆಸೆವ ಕಿಸಲಯದಂಥ ಬೆರಳಲಿ
ಹೊಸೆದ ಹೂವಿನ ಮಾಲೆಯೊಂದನು ಕೊರಳಿಗಿಕ್ಕುತಲಿ|
ಹುಸಿಯ ಮದುವೆಯನಾಟವಾಡಿದ
ರ‌ಸಿಕ ಚಿತ್ತದ ಗೆಳತಿಯೆನ್ನೊಡೆ
ಹಸೆಯಮಣೆಯಲಿ ಇಂದು ಏಕೋ ನಾಚುತಿಹಳಲ್ಲ!||


ಛಂದಸ್ಸು: ಭಾಮಿನಿ ಷಟ್ಪದಿ

ಬಾಲ್ಯದಲ್ಲಿ, ಹೂಗಳ ರಾಶಿಯ ನಡುವೆ ಎಳೆಚಿಗುರಿನಂತೆ ಕೆಂಪಾಗಿ ಶೋಭಿಸುವ ತನ್ನ ಕೈಬೆರಳುಗಳಿಂದ ಹೂವಿನ ಮಾಲೆಯೊಂದನ್ನು ಹೆಣೆದು, ಅದನ್ನು ನನ್ನ ಕೊರಳಿಗೆ ಹಾಕಿ ಹುಸಿಮದುವೆಯ ಆಟವನ್ನು ಆಡಿದ್ದ ಈ ಹುಡುಗಿ, ಇಂದು ನನ್ನೆದುರು ಹಸೆಯಮಣೆಯಲ್ಲಿ ಯಾಕೆ ಇಷ್ಟೊಂದು ನಾಚಿಕೊಳ್ಳುತ್ತಿದ್ದಾಳೆ?!!!.

-ಉಮಾಶಂಕರ್.ಕೆ