Friday, March 6, 2026

ಒಂದು ಕಪ್ಪೆಯ ಕಥೆ


ಮಧ್ಯಾಹ್ನದ ಹೊತ್ತು. ಕೋಣೆಯಲ್ಲಿ ಕುಳಿತು ಲ್ಯಾಪ್ಟಾಪ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಹೊರಕೋಣೆಯಿಂದ ಬೆಕ್ಕಿನ ಮರಿಯೊಂದು ಅಳುವ ಸದ್ದು ಕೇಳಿಬಂತು. ಎದುರಿನ ಚಾವಡಿಗೆ ಬಂದೆ. ಮುಂದಿನ ಕಿಟಕಿಯಿಂದ ಧ್ವನಿ ಬರುತ್ತಿತ್ತು. ಪರದೆ ಸರಿಸಿ ಇಣುಕಿದೆ. ಹೊರಗೆ ಏನೂ ಕಾಣಲಿಲ್ಲ. ಸದ್ದು ತುಂಬಾ ಹತ್ತಿರದಿಂದ ಕೇಳಿಬರುತ್ತಿತ್ತು. ಕಿಟಕಿಗೆ ಮುಖವೊತ್ತಿ ಕೆಳಗೆ ನೋಡಿದೆ. ಊಹೂಂ! ಏನೂ ಕಾಣಲಿಲ್ಲ. 'ಶಬ್ದ ಇಷ್ಟು ಹತ್ತಿರದಿಂದ ಕೇಳಿಸುತ್ತಿದೆಯೆಂದರೆ ಇನ್ನೇನು ಈಗ ಬೆಕ್ಕಿನ ಮರಿ ಕಾಣಲೇಬೇಕು' ಎಂದುಕೊಳ್ಳುತ್ತಾ ಕಿಟಕಿ ಹತ್ತಿ ಕೆಳಗಿಣುಕಿದೆ. ಎಲಾ ಎಲಾ! ಕೆಳಗಿಟ್ಟಿದ್ದ ನಮ್ಮ ಪಾದರಕ್ಷೆಗಳು ನನ್ನನ್ನು ಅಣಕಿಸಿದ್ದು ಬಿಟ್ಟರೆ ಬೇರೇನೂ ಕಂಡುಬರಲಿಲ್ಲ. 'ಮೀಂಯೋ.. ಮೀಂಯೋ..' ಎಂದು ಶಬ್ದ ಮಾತ್ರ ಸಿಕ್ಕಾಪಟ್ಟೆ ಹತ್ತಿರದಲ್ಲೇ ಕೇಳಿಬರುತ್ತಿತ್ತು. ಹೊರಗೆ ಹೋಗಿಯೇ ನೋಡೋಣವೆಂದು ಕೆಳಗಿಳಿದೆ. ಆಗ ಮತ್ತೆ ಆ ಸದ್ದು ಪುನರಾವರ್ತನೆಯಾಯ್ತು. ಥಟ್ಟನೇ ಅದು ಎಲ್ಲಿಂದ ಬರುತ್ತಿದೆಯೆಂದು ಸ್ಪಷ್ಟವಾಯಿತು. ಕಿಟಕಿಗೆ ನೇತುಹಾಕಿದ್ದ ಕೊಡೆಯೊಂದರಿಂದ ಆ ಕೀರಲು ಸದ್ದು ಹೊರಡುತ್ತಿತ್ತು. ನೇತುಹಾಕಿದ್ದ ಈ ಕೊಡೆಯೊಳಗೆ ಬೆಕ್ಕಿನ ಮರಿ ಹೇಗೆ ಹೋಯಿತಪ್ಪಾ ಎಂದು ಆಶ್ಚರ್ಯ ಪಡುತ್ತಾ ಅದನ್ನು ಆವರಿಸಿದ್ದ ಪರದೆಯನ್ನು ಸರಿಸುತ್ತಲೇ ಹೌಹಾರಿಬಿದ್ದೆ! ಅಲ್ಲಿದ್ದದ್ದು ಬೆಕ್ಕಿನಮರಿಯಲ್ಲ, ಅರ್ಧ ಮಾರುದ್ದದ ಒಂದು ಸಣ್ಣ ಸೈಜಿನ ಹಾವು! ಕೂಡಲೇ ಅರ್ಥವಾಯ್ತು: ಆ ಸದ್ದು ನಾನಂದುಕೊಂಡಂತೆ ಬೆಕ್ಕಿನಮರಿಯದಲ್ಲ; ಬದಲಾಗಿ ಈ ಹಾವಿನ ಬಾಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಒಂದು ಕಪ್ಪೆಯದು ಎಂದು. ಪರದೆಯನ್ನು ಪೂರ್ಣವಾಗಿ ಸರಿಸಲೆತ್ನಿಸಿದೆ. ಅದು ಮೇಲೆ ಸಿಕ್ಕಿಕೊಂಡಿದ್ದುದರಿಂದ ಫಕ್ಕನೇ ಬರಲಿಲ್ಲ. ಆದರೆ ಹಾವಿನ ಬಾಯಲ್ಲಿದ್ದ ಕಪ್ಪೆ ಚೆನ್ನಾಗಿ ಕಂಡಿತು. ಅದರ ಬಲತೊಡೆಯನ್ನು ಹಾವು ಗಟ್ಟಿಯಾಗಿ ಕಚ್ಚಿ ಹಿಡಿದುಕೊಂಡಿತ್ತು. ನೋವಿನಿಂದಲೋ ಭಯದಿಂದಲೋ ಕಪ್ಪೆ ಕೀರಲು ಧ್ವನಿಯಲ್ಲಿ ಕಿರುಚುತ್ತಿತ್ತು. ಕಪ್ಪೆಯನ್ನು ಇನ್ನಷ್ಟು ಒಳಗೆಳೆದುಕೊಳ್ಳಲು ಹಾವು ಪ್ರಯತ್ನಪಡುತ್ತಿತ್ತು. ನನ್ನಲ್ಲಿದ್ದ ವನ್ಯಜೀವಿ ಛಾಯಾಗ್ರಾಹಕ ತಟ್ಟನೇ ಎಚ್ಚೆತ್ತ. ಕ್ಯಾಮೆರಾ ತರಲು ಓಡಿದೆ. ತಂದವನೇ ಪರದೆ ಮೇಲೆತ್ತಿದೆ. ಆದರೆ ಅಷ್ಟು ಹೊತ್ತಿಗಾಗಲೇ ಹಾವಿಗೆ ನನ್ನ ಇರುವು ಗೊತ್ತಾಯಿತೆನಿಸುತ್ತದೆ; ಅಥವಾ ಕಪ್ಪೆಯೇ ಬಲವಾಗಿ ಝಾಡಿಸಿತೋ ಗೊತ್ತಿಲ್ಲ. ಅಂತೂ ಕಪ್ಪೆ ಠಪ್ಪೆಂದು ನೆಲಕ್ಕೆ ಹಾರಿತು. ಹಾವು ಒಂದು ಕ್ಷಣ ತಲೆದೂಗಿ ಕಿಟಕಿಯಿಂದ ಹೊರಕ್ಕೆ ಸರಿಯಿತು. ಕಿಟಕಿಯನ್ನು ಮೆಲ್ಲಗೆ ಅಲುಗಾಡಿಸಿದೆ. ಗಾಬರಿಬಿದ್ದ ಹಾವು ಹೊರಗಿನ ಹಜಾರದ ನೆಲಕ್ಕೆ ಜಿಗಿಯಿತು. ನಾನೂ ಬಾಗಿಲಿನಿಂದ ಹೊರಗೋಡಿದೆ. ಅಲ್ಲಿ ನನಗೋಸ್ಕರ ಪೋಸು ಕೊಡುತ್ತಿದೆಯೇನೋ ಎಂಬಂತೆ ಅದು ನನ್ನನ್ನು ತಲೆಯೆತ್ತಿ ನೋಡುತ್ತಿತ್ತು. ಕೆಲವೊಂದಷ್ಟು ಫೋಟೋ ತೆಗೆದೆ. ನೆಲಕ್ಕೆ ಹಾರಿದ ರೀತಿಯಲ್ಲಿಯೇ ಅದೊಂದು ಮರಹಾವು ಎಂದು ಗೊತ್ತಾಗಿತ್ತು. ಈಗ ಅದರ ಸುಂದರ ಕಂಚಿನ ಮೈಬಣ್ಣ ಬಿಸಿಲಿಗೆ ಹೊಳೆಯುತ್ತಿತ್ತು. ಇದನ್ನು ನೋಡಿಯೇ ಈ ರೀತಿಯ ಹಾವುಗಳನ್ನು Bronzeback ಎಂದು ಕರೆದರು. ಪ್ರಖ್ಯಾತ ಉರಗಶಾಸ್ತ್ರಜ್ಞ ವರದ ಗಿರಿ ಯವರ ಗೌರವಾರ್ಥ ಈ ಸದರಿ ಹಾವನ್ನು Giri's Bronzeback ಎಂದರು. ತುಂಬಾ ಸಾಧುವಾದ, ವಿಷಕಾರಿಯಲ್ಲದ ಹಾವು. ಆಗಾಗ ತನ್ನ ಕೆಂಪಾದ ಸೀಳು ನಾಲಿಗೆಯನ್ನು ಛಳಪಿಸುತ್ತಾ ಕೊಂಚ ಹೊತ್ತು ನನಗೆ ಫೋಟೋ ತೆಗೆಯಲು ಬಿಟ್ಟು ಅನಂತರ ಸರಸರನೆ ಅಂಗಳದಲ್ಲಿ ಅದರ ಪಾಡಿಗೆ ಹರಿದುಹೋಯಿತು. ನಾನು ಒಳಬಂದು ಈ ಬಡಪಾಯಿ ಕಪ್ಪೆ ಎಲ್ಲಿದೆ ಎಂದು ಹುಡುಕಿದರೆ ಅದು ಕೋಣೆಯ ಮತ್ತೊಂದು ಮೂಲೆಯ ಗೋಡೆಯಲ್ಲಿ ಕುಳಿತು ಸುಧಾರಿಸಿಕೊಳ್ಳುತ್ತಿತ್ತು. ಅದೂ ಒಂದು ಮರಗಪ್ಪೆ (Indian Tree frog). ಕೆಲವೇ ದಿನಗಳ ಹಿಂದೆ ಅದರ ಕೆಲವೊಂದಷ್ಟು ಚಿತ್ರಗಳನ್ನೂ ತೆಗೆದಿದ್ದೆ. ಅದನ್ನು ಅಲ್ಲೇ ಸುಧಾರಿಸಿಕೊಳ್ಳಲು ಬಿಟ್ಟು ನಮ್ಮ ಮೂವರ ಗಲಾಟೆಯಲ್ಲಿ ಅಸ್ತವ್ಯಸ್ತವಾಗಿದ್ದ ಪರದೆಯನ್ನು ಸರಿಪಡಿಸಿ ಅಲ್ಲಿಯವರೆಗೆ ಸಂಪೂರ್ಣ ಮರೆತಿದ್ದ ನನ್ನ ಕೆಲಸವನ್ನು ಮುಂದುವರೆಸಲು ಕೋಣೆಯೊಳಗೆ ಹೊಕ್ಕೆ.
- ಉಮಾಶಂಕರ್ ಕೆ

Tuesday, August 13, 2024

ಮಯೂರ ನೃತ್ಯ



ಅಲ್ಲಿ ನೋಡು ಹುಲ್ಲುಹಾಸಿ-
ನಲ್ಲಿ ತಲೆಯ ತೂಗಿ ನಲಿದು
ಬಳ್ಳಿಗೊರಳ ಕೊಂಕಿಸಿರ್ಪ ನೀಲಬರ್ಹಿಣ|

ತನ್ನರಸಿಯ ನೋಡಲೀಗ
ಮುನ್ನ ದೇವ ಕೊಟ್ಟ ಎರಡು 
ಕಣ್ಣು ಸಾಲದೆಂದು ನವಿಲು ಗರಿಯ ಬಿಚ್ಚಿತೋ?|

ಹೊಳೆವ ನೂರು ಕಣ್ಣ ತೆರೆದು
ಅಲೆವ ಮನವನವಳಲಿಟ್ಟು
ಬಲಿತ ರಾಗಭಾವವನ್ನು ಜಗಕೆ ತೋರಿತೋ?|

ಗರಿಗಳೆಲ್ಲ ಮನಸಿನೊಲವ-
ನರಿತು ಕಂಪಿಸಿಹವು ಮದನ
ಶರದ ಬಾಧೆ ತಡೆಯಲಳವೆ ಜಗದ ಜೀವಕೆ?|

ಮಲೆತು ತನ್ನ ಮನವನೆಲ್ಲ
ಬಲೆಯ ಮಾಡಿ ಸೆಳೆಯಲೆಳಸಿ
ನಲಿವ ಶಿಖಿಗೆ ಶಿವನು ತನ್ನ ಕೃಪೆಯ ತೋರನೇ?|
ಕಲೆವ ಬಯಕೆಯಿಂದ ರಮಣಿಯೊಲಿದು ಬಾರಳೇ?|

- ಉಮಾಶಂಕರ್ ಕೆ