ಸಣ್ಣವರಿದ್ದಾಗ ಯಕ್ಷಗಾನ ನೋಡುವ ಹುಚ್ಚು ಹತ್ತಿಸಿಕೊಳ್ಳದವರು ಯಾರಿದ್ದಾರೆ ಹೇಳಿ? ನಾನಂತೂ ಯಕ್ಷಗಾನ ಎಲ್ಲೇ ನಡೆಯಲಿ; ಅಲ್ಲಿಗೆ ನನ್ನನ್ನು ಕರೆದೊಯ್ಯಲು ಅಪ್ಪನನ್ನು ಕಾಡಿಸಿ, ಪೀಡಿಸಿ ಅವರಿಗೆ ದುಂಬಾಲು ಬೀಳುತ್ತಿದ್ದೆ. ಹೋಗುವ ಹಪಹಪಿಯಲ್ಲಿರುತ್ತಿದ್ದ ನನಗೆ ಅವರು ಹೊರಡಲು ಸಿದ್ಧರಾಗುವುದು ಯಾವತ್ತೂ ವಿಳಂಬವಾದಂತೆಯೇ ಅನ್ನಿಸುತ್ತಿತ್ತು!. ನಡೆದುಕೊಂಡೋ, ಸ್ಕೂಟರಿನಲ್ಲೋ ಹೋಗುತ್ತಿದ್ದೆವು. ಯಕ್ಷಗಾನ ಪ್ರದರ್ಶನದ ಸ್ಥಳ ಸಮೀಪಿಸುತ್ತಿದ್ದಂತೆಯೇ ಕೇಳುವ ಚೆಂಡೆ-ಮದ್ದಳೆಗಳ ಘೋಷಕ್ಕೆ ಕಾಲುಗಳು ತಕತಕ ಕುಣಿಯುವಂತಾಗಿ, ಹೆಚ್ಚು ಕಡಿಮೆ ಓಡುತ್ತಲೇ ನಡೆಯುತ್ತಿದ್ದೆ. ಈ ಅಪ್ಪ ಬೇಗ ಬೇಗ ಬರಬಾರದೇ ಎಂದೆನಿಸಿಬಿಡುತ್ತಿತ್ತು. ಆ ಸಮಯದಲ್ಲಿ ಅಪ್ಪನ ಪರಿಚಯಸ್ಥರು ಯಾರಾದರೂ ಸಿಕ್ಕಿ ಮಾತನಾಡಲು ತೊಡಗಿದರೆ ಸಿಟ್ಟು ನೆತ್ತಿಗಡರುತ್ತಿತ್ತು. ಅಪ್ಪನ ಕೈ ಹಿಡಿದು "ಹೋಗುವಾ...ಹೋಗುವಾ.." ಎಂದು ಎಳೆಯತೊಡಗುತ್ತಿದ್ದೆ.
ಊರಜಾತ್ರೆ, ಚೌತಿ, ನವರಾತ್ರಿಗಳ ಕರೆಯೋಲೆಗಳು ಬಂದಾಗ ಮೊದಲು ಅದು ನನ್ನ ಕೈಗೆ ಸಿಗಬೇಕು. ಅದರಲ್ಲಿ ಮೂರನೆಯದೋ, ನಾಲ್ಕನೆಯದೋ ಪುಟದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಎಂದು ದೊಡ್ಡಕ್ಷರಗಳಲ್ಲಿ ಬರೆದ ಪ್ರಸಂಗ, ಕೆಳಗೆ ಸಣ್ಣಕ್ಷರಗಳಲ್ಲಿ ನೀಡಿದ ಕಲಾವಿದರ ಹೆಸರು, ವಿವರಗಳ ಮೇಲೆ ಕಣ್ಣಾಡಿಸುವವರೆಗೆ ನನ್ನ ಮನಸ್ಸಿಗೆ ಸಮಾಧಾನವಿರುತ್ತಿರಲಿಲ್ಲ. ಅಷ್ಟರಲ್ಲಿಯೇ ಆ ಕಾಲದ ಪ್ರಸಿದ್ಧ ಹಿಮ್ಮೇಳ, ಮುಮ್ಮೇಳಗಳ ಕಲಾವಿದರ ಹೆಸರುಗಳು ನನಗೆ ಚಿರಪರಿಚಿತವಾಗಿದ್ದವು.
ನಮ್ಮೂರಿನ ದೊಡ್ಡವರೊಬ್ಬರ ಪ್ರಾಯೋಜಕತ್ವದಲ್ಲಿ ನಡೆದ ಯಕ್ಷಗಾನಮಾಲಿಕೆಯ ಪ್ರತಿಯೊಂದು ಸರಣಿಗೂ ತಪ್ಪದೇ ಹಾಜರಿದ್ದು ವೀಕ್ಷಿಸಿದ್ದೆ. ಕೊನೆಗೆ ಅದು ಮುಗಿದ ಮೇಲೆ ಅದರ ಬಗೆಗೆ ನಾನೊಂದು ಅಭಿಪ್ರಾಯ ಬರೆದುಕೊಡಬೇಕೆಂದು ಕೇಳಿಕೊಂಡರು. ಆಗ ನಾನು ಐದನೆಯ ಕ್ಲಾಸಿನಲ್ಲಿದ್ದೆ. ದೊಡ್ಡಕ್ಕ ಹೇಳಿಕೊಟ್ಟಂತೆ 'ನನ್ನ' ಅಭಿಪ್ರಾಯ ಬರೆದು ಕಳುಹಿಸಿದ್ದೆ. ಆ ಯಕ್ಷಗಾನಮಾಲಿಕೆಯ ವಿವರಗಳನ್ನೊಳಗೊಂಡ ಪುಸ್ತಕದ ಕೊನೆಯ ಪುಟದಲ್ಲಿ ಅದು ಮುದ್ರಿತವಾಗಿತ್ತು.
ನನ್ನ ಜೀವನಚರಿತ್ರೆಯಲ್ಲಿ ಇನ್ನೂ ಹಿಂದಕ್ಕೆ ಹೋದರೆ ನನಗೆ ಒಂದನೆಯ ತರಗತಿಯಲ್ಲೇ ಯಕ್ಷಗಾನ ಬಯಲಾಟ ನೋಡುವ ಹುಚ್ಚಿತ್ತು ಎಂಬುದಕ್ಕೆ ಕೆಲವು ಸಾಕ್ಷಿಗಳು ದೊರೆಯುತ್ತವೆ:- ನಾನೊಮ್ಮೆ ರಜೆಯಲ್ಲಿ ಅಜ್ಜಿಯಮನೆಗೆ ಹೋಗಿದ್ದೆನಂತೆ. ಆ ರಾತ್ರಿ ನಮ್ಮ ಹತ್ತಿರದ ಸಂಬಂಧಿಕರೊಬ್ಬರ ಹರಕೆಯಾಟ ನಡೆಯಲಿದೆ ಎಂದು ತಿಳಿಯಿತು. ಅಜ್ಜಿ ಮತ್ತು ನನ್ನ ಅಕ್ಕ ಹೋಗುವವರಿದ್ದರು. ಸರಿ.. ಎಂದಿನಂತೆ, ನಾನೂ ಹೋಗುತ್ತೇನೆಂದು ಹಟಹಿಡಿದೆನಂತೆ. ಅಮ್ಮ "ನಿನಗೆ ನಿದ್ರೆ ಬರಬಹುದು" ಎಂದು ತಡೆದರೂ ಕೇಳಲಿಲ್ಲವಂತೆ. ಅಜ್ಜಿಯೂ ಅಮ್ಮನ ಮನವೊಲಿಸಿದರಂತೆ. ಕೊನೆಗೂ ನಾವು ಮೂವರು- ಅಜ್ಜಿ, ಅಕ್ಕ, ನಾನು- ಹೊರಟೆವು. ಮರುದಿನ ಮುಂಜಾವದವರೆಗೂ ವೀಕ್ಷಿಸಿ ಹಿಂದಿರುಗಿದೆವು. ಅಜ್ಜಿ, ಅಮ್ಮನ ಬಳಿ "ಅವನನ್ನು ಕರೆದುಕೊಂಡು ಹೋಗದಿರುತ್ತಿದ್ದರೆ ನಮಗೆ ಪಾಪ ಬರುತ್ತಿತ್ತು. ಇಡೀ ರಾತ್ರಿ ಒಂದು ಕ್ಷಣವೂ ಕಣ್ಣು ಮುಚ್ಚಲಿಲ್ಲ" ಅಂದರಂತೆ! ಆ ಬಯಲಾಟದ ವೇಷಗಳೆಲ್ಲಾ ನೆನಪಿನಲ್ಲಿಲ್ಲದಿದ್ದರೂ, ನಡುರಾತ್ರಿ ಸಂಬಂಧಿಕರ ಹುಡುಗನೊಬ್ಬ ಚಹಾ, ಕಡಿ, ಅಂಬೊಡೆಗಳನ್ನು ವಿತರಿಸಲು ಬಂದಾಗ ಅಜ್ಜಿಯ ತೊಡೆಯಲ್ಲಿ ನನಗೆ ಎಚ್ಚರವಾದದ್ದು ಚೆನ್ನಾಗಿ ನೆನಪಿದೆ! ಅನಂತರ ಒಂದು ಕ್ಷಣವೂ ಕಣ್ಣು ಮುಚ್ಚಲಿಲ್ಲ ಬಿಡಿ.
ಅನೇಕ ಯಕ್ಷಗಾನ ಪ್ರಸಂಗಗಳಲ್ಲಿ ಬರುವ ರಕ್ಕಸರ ವೇಷ , ಕುಣಿತ, ಅಬ್ಬರಗಳಿಗೆ ನಾನು ಬೆರಗಾಗಿಹೋದದ್ದುಂಟು. ದೇವಿಮಹಾತ್ಮೆ ಪ್ರಸಂಗದಲ್ಲಿ, ಕುಳಿತಿದ್ದ ಸಭಿಕರು ಬೆದರಿ ದೂರಸರಿದು ನಿಲ್ಲುವಂತೆ, ಚೆಂಡೆ-ಮದ್ದಳೆಗಳ ಕಿವಿಗಡಚಿಕ್ಕುವ ತಾರಕ ರವರವನಾದದ ನಡುವೆ, ರಾಳದ ಹುಡಿ ಎಬ್ಬಿಸಿದ ಬೆಂಕಿಯ ಉಂಡೆಗಳ ಬೆಳಕಿನಲ್ಲಿ ಹೊಳೆಯುತ್ತಾ ಅಬ್ಬರಿಸಿ ಬರುವ ಭೀಕರಾಕೃತಿಯ ಮಹಿಷಾಸುರನನ್ನು, ಬಿಟ್ಟಬಾಯಿ ಮುಚ್ಚದೆ, ಗರಬಡಿದವನಂತೆ ನಿಂತು ನೋಡಿದ್ದುಂಟು. ಇವನ್ನೆಲ್ಲಾ ನೆನಪಿಸಿಕೊಂಡಾಗ ನನಗನ್ನಿಸಿದ್ದು ಹೀಗೆ:-
ಗಂಡುಮೆಟ್ಟಿನ ನೆಲದ ಕಲೆಯಿದು
ಚೆಂಡೆಮದ್ದಳೆ ಘೋಷ ಕಲೆವುದು
ದಂಡಧರನೂ ನೋಡಬೆದರುವ ವೇಷವಿಲ್ಲಿಹುದು|
ಹಂಡೆಗಾತ್ರದ ಮುಕುಟವಿಟ್ಟಿಹ
ಮಂಡೆಯನು ತೂಗುತ್ತ ಕುಣಿಯುತ
ದುಂಡುದುಂಡನೆ ಬಿಡದೆ ಸುತ್ತುವ ಶೂರರಿಲ್ಲಿಹರು||
ಈಗಲೂ ಮನೆಯಲ್ಲಿರುವ ಕೆಲವು ಅಪೂರ್ವ ಧ್ವನಿಸುರುಳಿಗಳನ್ನು ಆಗಾಗ್ಗೆ ಟೇಪ್ ರೆಕಾರ್ಡರಿನಲ್ಲಿ ಹಾಕಿ ಕೇಳುತ್ತಿರುತ್ತೇನೆ. ಶೇಣಿ, ಮಲ್ಪೆ ಸಾಮಗರು ಮುಂತಾದವರ ಅರ್ಥಗಾರಿಕೆ, ಬಲಿಪ, ಪೊಲ್ಯ ಶೆಟ್ರು, ಕಾಳಿಂಗ ನಾವಡ, ಪದ್ಯಾಣ, ಪುತ್ತಿಗೆ, ಧಾರೇಶ್ವರ ಮುಂತಾದವರ ಭಾಗವತಿಕೆಗಳನ್ನು ಕೇಳಿದಷ್ಟೂ ಸಾಕೆನಿಸುವುದಿಲ್ಲ. ಕೇಳಿದರೆ ಕೇಳುತ್ತಲೇ ಇರಬೇಕೆನ್ನಿಸುವ, ನೋಡುತ್ತಿದ್ದರೆ ಕಣ್ಣು ಮುಚ್ಚಲು ಮನಸು ಬಾರದಂತೆ ಮಗ್ನಗೊಳಿಸುವ ಈ ಕಲೆಗೆ ಭಾಮಿನಿ ಷಟ್ಪದಿಯಲ್ಲೊಂದು ನಮನ:-
ಯಕ್ಷಗಾನದ ಸೊಬಗ ಬಣ್ಣಿಸೆ
ಲಕ್ಷ ಪದಗಳು ಸಾಕು ಎನಿಪವೆ
ದೀಕ್ಷೆಯಿಂದಲಿ ಕುಳಿತು ವೀಕ್ಷಿಸೆ ನಿಶೆಯ ತಂಪಿನಲಿ|
ದಕ್ಷ ಕಂಠದ ಭಾಗವತರಿರೆ
ಯಕ್ಷಧೀಂಗಿಣರಸಿಕಸಭಿಕನು
ಅಕ್ಷಿಯನು ಮುಚ್ಚಿಸದ ಕಲೆಗಿದೊ ಜಯತು ಕೇಳೆಂದ||
-ಉಮಾಶಂಕರ್ ಕೆ