Saturday, May 4, 2024

ಯಕ್ಷಗಾನ

 


ಸಣ್ಣವರಿದ್ದಾಗ ಯಕ್ಷಗಾನ ನೋಡುವ ಹುಚ್ಚು ಹತ್ತಿಸಿಕೊಳ್ಳದವರು ಯಾರಿದ್ದಾರೆ ಹೇಳಿ? ನಾನಂತೂ ಯಕ್ಷಗಾನ ಎಲ್ಲೇ ನಡೆಯಲಿ; ಅಲ್ಲಿಗೆ ನನ್ನನ್ನು ಕರೆದೊಯ್ಯಲು ಅಪ್ಪನನ್ನು ಕಾಡಿಸಿ, ಪೀಡಿಸಿ ಅವರಿಗೆ ದುಂಬಾಲು ಬೀಳುತ್ತಿದ್ದೆ. ಹೋಗುವ ಹಪಹಪಿಯಲ್ಲಿರುತ್ತಿದ್ದ ನನಗೆ ಅವರು ಹೊರಡಲು ಸಿದ್ಧರಾಗುವುದು ಯಾವತ್ತೂ ವಿಳಂಬವಾದಂತೆಯೇ ಅನ್ನಿಸುತ್ತಿತ್ತು!. ನಡೆದುಕೊಂಡೋ, ಸ್ಕೂಟರಿನಲ್ಲೋ ಹೋಗುತ್ತಿದ್ದೆವು. ಯಕ್ಷಗಾನ ಪ್ರದರ್ಶನದ ಸ್ಥಳ ಸಮೀಪಿಸುತ್ತಿದ್ದಂತೆಯೇ ಕೇಳುವ ಚೆಂಡೆ-ಮದ್ದಳೆಗಳ ಘೋಷಕ್ಕೆ ಕಾಲುಗಳು ತಕತಕ ಕುಣಿಯುವಂತಾಗಿ, ಹೆಚ್ಚು ಕಡಿಮೆ ಓಡುತ್ತಲೇ ನಡೆಯುತ್ತಿದ್ದೆ. ಈ ಅಪ್ಪ ಬೇಗ ಬೇಗ ಬರಬಾರದೇ ಎಂದೆನಿಸಿಬಿಡುತ್ತಿತ್ತು. ಆ ಸಮಯದಲ್ಲಿ ಅಪ್ಪನ ಪರಿಚಯಸ್ಥರು ಯಾರಾದರೂ ಸಿಕ್ಕಿ ಮಾತನಾಡಲು ತೊಡಗಿದರೆ ಸಿಟ್ಟು ನೆತ್ತಿಗಡರುತ್ತಿತ್ತು. ಅಪ್ಪನ ಕೈ ಹಿಡಿದು "ಹೋಗುವಾ...ಹೋಗುವಾ.." ಎಂದು ಎಳೆಯತೊಡಗುತ್ತಿದ್ದೆ.


ಊರಜಾತ್ರೆ, ಚೌತಿ, ನವರಾತ್ರಿಗಳ ಕರೆಯೋಲೆಗಳು ಬಂದಾಗ ಮೊದಲು ಅದು ನನ್ನ ಕೈಗೆ ಸಿಗಬೇಕು. ಅದರಲ್ಲಿ ಮೂರನೆಯದೋ, ನಾಲ್ಕನೆಯದೋ ಪುಟದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಎಂದು ದೊಡ್ಡಕ್ಷರಗಳಲ್ಲಿ ಬರೆದ ಪ್ರಸಂಗ, ಕೆಳಗೆ ಸಣ್ಣಕ್ಷರಗಳಲ್ಲಿ ನೀಡಿದ ಕಲಾವಿದರ ಹೆಸರು, ವಿವರಗಳ ಮೇಲೆ ಕಣ್ಣಾಡಿಸುವವರೆಗೆ ನನ್ನ ಮನಸ್ಸಿಗೆ ಸಮಾಧಾನವಿರುತ್ತಿರಲಿಲ್ಲ. ಅಷ್ಟರಲ್ಲಿಯೇ ಆ ಕಾಲದ ಪ್ರಸಿದ್ಧ ಹಿಮ್ಮೇಳ, ಮುಮ್ಮೇಳಗಳ ಕಲಾವಿದರ ಹೆಸರುಗಳು ನನಗೆ ಚಿರಪರಿಚಿತವಾಗಿದ್ದವು.

ನಮ್ಮೂರಿನ ದೊಡ್ಡವರೊಬ್ಬರ ಪ್ರಾಯೋಜಕತ್ವದಲ್ಲಿ ನಡೆದ ಯಕ್ಷಗಾನಮಾಲಿಕೆಯ ಪ್ರತಿಯೊಂದು ಸರಣಿಗೂ ತಪ್ಪದೇ ಹಾಜರಿದ್ದು ವೀಕ್ಷಿಸಿದ್ದೆ. ಕೊನೆಗೆ ಅದು ಮುಗಿದ ಮೇಲೆ ಅದರ ಬಗೆಗೆ ನಾನೊಂದು ಅಭಿಪ್ರಾಯ ಬರೆದುಕೊಡಬೇಕೆಂದು ಕೇಳಿಕೊಂಡರು. ಆಗ ನಾನು ಐದನೆಯ ಕ್ಲಾಸಿನಲ್ಲಿದ್ದೆ. ದೊಡ್ಡಕ್ಕ ಹೇಳಿಕೊಟ್ಟಂತೆ 'ನನ್ನ' ಅಭಿಪ್ರಾಯ ಬರೆದು ಕಳುಹಿಸಿದ್ದೆ. ಆ ಯಕ್ಷಗಾನಮಾಲಿಕೆಯ ವಿವರಗಳನ್ನೊಳಗೊಂಡ ಪುಸ್ತಕದ ಕೊನೆಯ ಪುಟದಲ್ಲಿ ಅದು ಮುದ್ರಿತವಾಗಿತ್ತು.

ನನ್ನ ಜೀವನಚರಿತ್ರೆಯಲ್ಲಿ ಇನ್ನೂ ಹಿಂದಕ್ಕೆ ಹೋದರೆ ನನಗೆ ಒಂದನೆಯ ತರಗತಿಯಲ್ಲೇ ಯಕ್ಷಗಾನ ಬಯಲಾಟ ನೋಡುವ ಹುಚ್ಚಿತ್ತು ಎಂಬುದಕ್ಕೆ ಕೆಲವು ಸಾಕ್ಷಿಗಳು ದೊರೆಯುತ್ತವೆ:- ನಾನೊಮ್ಮೆ ರಜೆಯಲ್ಲಿ ಅಜ್ಜಿಯಮನೆಗೆ ಹೋಗಿದ್ದೆನಂತೆ. ಆ ರಾತ್ರಿ ನಮ್ಮ ಹತ್ತಿರದ ಸಂಬಂಧಿಕರೊಬ್ಬರ ಹರಕೆಯಾಟ ನಡೆಯಲಿದೆ ಎಂದು ತಿಳಿಯಿತು. ಅಜ್ಜಿ ಮತ್ತು ನನ್ನ ಅಕ್ಕ ಹೋಗುವವರಿದ್ದರು. ಸರಿ.. ಎಂದಿನಂತೆ, ನಾನೂ ಹೋಗುತ್ತೇನೆಂದು ಹಟಹಿಡಿದೆನಂತೆ. ಅಮ್ಮ "ನಿನಗೆ ನಿದ್ರೆ ಬರಬಹುದು" ಎಂದು ತಡೆದರೂ ಕೇಳಲಿಲ್ಲವಂತೆ. ಅಜ್ಜಿಯೂ ಅಮ್ಮನ ಮನವೊಲಿಸಿದರಂತೆ. ಕೊನೆಗೂ ನಾವು ಮೂವರು- ಅಜ್ಜಿ, ಅಕ್ಕ, ನಾನು- ಹೊರಟೆವು. ಮರುದಿನ ಮುಂಜಾವದವರೆಗೂ ವೀಕ್ಷಿಸಿ ಹಿಂದಿರುಗಿದೆವು. ಅಜ್ಜಿ, ಅಮ್ಮನ ಬಳಿ "ಅವನನ್ನು ಕರೆದುಕೊಂಡು ಹೋಗದಿರುತ್ತಿದ್ದರೆ ನಮಗೆ ಪಾಪ ಬರುತ್ತಿತ್ತು. ಇಡೀ ರಾತ್ರಿ ಒಂದು ಕ್ಷಣವೂ ಕಣ್ಣು ಮುಚ್ಚಲಿಲ್ಲ" ಅಂದರಂತೆ! ಆ ಬಯಲಾಟದ ವೇಷಗಳೆಲ್ಲಾ ನೆನಪಿನಲ್ಲಿಲ್ಲದಿದ್ದರೂ, ನಡುರಾತ್ರಿ ಸಂಬಂಧಿಕರ ಹುಡುಗನೊಬ್ಬ ಚಹಾ, ಕಡಿ, ಅಂಬೊಡೆಗಳನ್ನು ವಿತರಿಸಲು ಬಂದಾಗ ಅಜ್ಜಿಯ ತೊಡೆಯಲ್ಲಿ ನನಗೆ ಎಚ್ಚರವಾದದ್ದು ಚೆನ್ನಾಗಿ ನೆನಪಿದೆ! ಅನಂತರ ಒಂದು ಕ್ಷಣವೂ ಕಣ್ಣು ಮುಚ್ಚಲಿಲ್ಲ ಬಿಡಿ.

ಅನೇಕ ಯಕ್ಷಗಾನ ಪ್ರಸಂಗಗಳಲ್ಲಿ ಬರುವ ರಕ್ಕಸರ ವೇಷ , ಕುಣಿತ, ಅಬ್ಬರಗಳಿಗೆ ನಾನು ಬೆರಗಾಗಿ‌ಹೋದದ್ದುಂಟು. ದೇವಿಮಹಾತ್ಮೆ ಪ್ರಸಂಗದಲ್ಲಿ, ಕುಳಿತಿದ್ದ ಸಭಿಕರು ಬೆದರಿ ದೂರಸರಿದು ನಿಲ್ಲುವಂತೆ, ಚೆಂಡೆ-ಮದ್ದಳೆಗಳ ಕಿವಿಗಡಚಿಕ್ಕುವ ತಾರಕ ರವರವನಾದದ ನಡುವೆ, ರಾಳದ ಹುಡಿ ಎಬ್ಬಿಸಿದ ಬೆಂಕಿಯ ಉಂಡೆಗಳ ಬೆಳಕಿನಲ್ಲಿ ಹೊಳೆಯುತ್ತಾ ಅಬ್ಬರಿಸಿ ಬರುವ ಭೀಕರಾಕೃತಿಯ ಮಹಿಷಾಸುರನನ್ನು, ಬಿಟ್ಟಬಾಯಿ ಮುಚ್ಚದೆ, ಗರಬಡಿದವನಂತೆ ನಿಂತು ನೋಡಿದ್ದುಂಟು. ಇವನ್ನೆಲ್ಲಾ ನೆನಪಿಸಿಕೊಂಡಾಗ ನನಗನ್ನಿಸಿದ್ದು ಹೀಗೆ:-

ಗಂಡುಮೆಟ್ಟಿನ ನೆಲದ ಕಲೆಯಿದು
ಚೆಂಡೆಮದ್ದಳೆ ಘೋಷ ಕಲೆವುದು
ದಂಡಧರನೂ ನೋಡಬೆದರುವ ವೇಷವಿಲ್ಲಿಹುದು|
ಹಂಡೆಗಾತ್ರದ ಮುಕುಟವಿಟ್ಟಿಹ
ಮಂಡೆಯನು ತೂಗುತ್ತ ಕುಣಿಯುತ
ದುಂಡುದುಂಡನೆ ಬಿಡದೆ ಸುತ್ತುವ ಶೂರರಿಲ್ಲಿಹರು||

ಈಗಲೂ ಮನೆಯಲ್ಲಿರುವ ಕೆಲವು ಅಪೂರ್ವ ಧ್ವನಿಸುರುಳಿಗಳನ್ನು ಆಗಾಗ್ಗೆ ಟೇಪ್ ರೆಕಾರ್ಡರಿನಲ್ಲಿ ಹಾಕಿ ಕೇಳುತ್ತಿರುತ್ತೇನೆ. ಶೇಣಿ, ಮಲ್ಪೆ ಸಾಮಗರು ಮುಂತಾದವರ ಅರ್ಥಗಾರಿಕೆ, ಬಲಿಪ, ಪೊಲ್ಯ ಶೆಟ್ರು, ಕಾಳಿಂಗ ನಾವಡ, ಪದ್ಯಾಣ, ಪುತ್ತಿಗೆ, ಧಾರೇಶ್ವರ ಮುಂತಾದವರ ಭಾಗವತಿಕೆಗಳನ್ನು ಕೇಳಿದಷ್ಟೂ ಸಾಕೆನಿಸುವುದಿಲ್ಲ. ಕೇಳಿದರೆ ಕೇಳುತ್ತಲೇ ಇರಬೇಕೆನ್ನಿಸುವ, ನೋಡುತ್ತಿದ್ದರೆ ಕಣ್ಣು ಮುಚ್ಚಲು ಮನಸು ಬಾರದಂತೆ ಮಗ್ನಗೊಳಿಸುವ ಈ ಕಲೆಗೆ ಭಾಮಿನಿ ಷಟ್ಪದಿಯಲ್ಲೊಂದು ನಮನ:-

ಯಕ್ಷಗಾನದ ಸೊಬಗ ಬಣ್ಣಿಸೆ
ಲಕ್ಷ ಪದಗಳು ಸಾಕು ಎನಿಪವೆ
ದೀಕ್ಷೆಯಿಂದಲಿ ಕುಳಿತು ವೀಕ್ಷಿಸೆ ನಿಶೆಯ ತಂಪಿನಲಿ|
ದಕ್ಷ ಕಂಠದ ಭಾಗವತರಿರೆ
ಯಕ್ಷಧೀಂಗಿಣರಸಿಕಸಭಿಕನು
ಅಕ್ಷಿಯನು ಮುಚ್ಚಿಸದ ಕಲೆಗಿದೊ ಜಯತು ಕೇಳೆಂದ||

-ಉಮಾಶಂಕರ್ ಕೆ

Tuesday, April 23, 2024

ವಿಶ್ವ ಪುಸ್ತಕದಿನ

 


ಇವತ್ತು ವಿಶ್ವ ಪುಸ್ತಕ ದಿನವಂತೆ. ನನಗೆ ಪುಸ್ತಕಗಳನ್ನೋದುವ ಹುಚ್ಚು ಬೆಳೆದ ನೆನಪಾಗುತ್ತಿದೆ.

ನಮ್ಮ ಮನೆಯಲ್ಲಿ ಟಿ‌ವಿ ಇಲ್ಲ. ಸಣ್ಣವರಿದ್ದಾಗ ಅಪ್ಪ ತರುತ್ತಿದ್ದ ಬಾಲಮಂಗಳ, ಮನೆಯಲ್ಲಿದ್ದ ಹಳೆಯ ಚಂದಮಾಮಗಳನ್ನು ನನಗೆ ಮೊದಲು, ನನಗೆ ಮೊದಲು ಎಂದು ಜಗಳ ಮಾಡಿ ಓದುತ್ತಿದ್ದೆವು. ಬೆಳಿಗ್ಗೆದ್ದು ಕಷಾಯ ಕುಡಿಯುವಾಗಿನಿಂದ ಹಿಡಿದು, ತಿಂಡಿ, ಊಟಗಳ ಸಮಯದಲ್ಲೂ ಕೈಯಲ್ಲಿ ಪುಸ್ತಕಗಳಿರುತ್ತಿದ್ದವು. ಊಟ ಮಾಡುವಾಗಾದರೂ ಪುಸ್ತಕ ಬದಿಗಿಡಬಾರದೇ ಎಂದು ಅಪ್ಪ, ಅಮ್ಮ ಬೈಯ್ಯುತ್ತಿದ್ದರು. ದೊಡ್ಡಕ್ಕ ಅಪ್ಪನ ಆಫೀಸಿನ ಲೈಬ್ರರಿಯಿಂದ ತಂದ, ಯಂಡಮೂರಿ ವೀರೇಂದ್ರನಾಥರ, ಅಂತಿಮ ಹೋರಾಟ ಪುಸ್ತಕವನ್ನು ರೋಚಕವಾಗಿ ನನಗೆ ಹಾಗೂ ಸಣ್ಣಕ್ಕನಿಗೆ ಓದುತ್ತಿದ್ದದ್ದು ಕಣ್ಣಿಗೆ ಕಟ್ಟಿದಂತಿದೆ. ಆಮೇಲೆ ಅವಳ ಬಾಣಂತನದಲ್ಲಿ ನಾನು ಎಷ್ಟೋ ಪುಸ್ತಕಗಳನ್ನು ಅವಳಿಗೆ ಓದಿ ಹೇಳಿ ಆ ಋಣ ತೀರಿಸಿದೆನೆನ್ನಿ! ಆಮೇಲೆ ಅಪ್ಪನ ಗ್ರಂಥ ಭಂಡಾರದಲ್ಲಿದ್ದ ಕುವೆಂಪು ಸಿಕ್ಕಿದರು. ಅವರ ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ಮಲೆನಾಡಿನ ಚಿತ್ರಗಳು ಮುಂತಾದವನ್ನೆಲ್ಲ ಪ್ರೌಢಶಾಲೆ ಮುಗಿಯುವ ಮುನ್ನ ಓದಿ ಮುಗಿಸಿದ್ದಾಗಿತ್ತು. ಎಂಟನೆಯಲ್ಲೋ ಒಂಭತ್ತನೆಯಲ್ಲೋ ಕೇಂದ್ರ ಗ್ರಂಥಾಲಯದ ಲೈಬ್ರರಿ ಕಾರ್ಡ್ ಮಾಡಿಸಿಕೊಂಡೆವು; ನಾನು, ಸಣ್ಣಕ್ಕ. ಅಲ್ಲಿಂದ ಶುರು: ಯಂಡಮೂರಿ ವೀರೇಂದ್ರನಾಥ್, ತರಾಸು, ಅನಕೃ, ಪೂರ್ಣಚಂದ್ರ ತೇಜಸ್ವಿ, ರವೀಂದ್ರನಾಥ್ ಠಾಗೋರ್, ಪಿ ಎಸ್ ಶ್ರೀನಿವಾಸ್ ಮುಂತಾದವರನ್ನೆಲ್ಲಾ ಗಬಗಬನೆ ಓದಿ ಮುಗಿಸಿದೆವು. ಡಿಗ್ರಿಗೆ ಬರುವಾಗ ಮತ್ತೆ ಕೆಲ ಮಹನೀಯರು ಪರಿಚಯವಾದರು: ಬಿ ಜಿ ಎಲ್ ಸ್ವಾಮಿ, ಗೊರೂರು ರಾಮಸ್ವಾಮಿ ಐಯಂಗಾರ್, ಮಾಸ್ತಿ, ಶಿವರಾಮ ಕಾರಂತ ಇತ್ಯಾದಿ. ಅಲ್ಲಿಯವರೆಗೆ ಹಳೆಗನ್ನಡ ಕಾವ್ಯಗಳನ್ನು ಓದಿರಲಿಲ್ಲ. ಮನೆಯಲ್ಲಿ ಅಪ್ಪ ರಾತ್ರಿಯೂಟ ಮುಗಿಸಿ ಕುಮಾರವ್ಯಾಸ ಭಾರತ, ರಾಮಾಯಣ ದರ್ಶನಂ, ರಾಮಾಶ್ವಮೇಧಮ್ ಗಳ ಭಾಗಗಳನ್ನು ರಾಗವಾಗಿ ಓದುವುದನ್ನು, ಅಮ್ಮ ಅವರ ಪಠ್ಯದಲ್ಲಿದ್ದ ಲಕ್ಷ್ಮೀಶನ ಜೈಮಿನಿ ಭಾರತದ ಭಾಗಗಳನ್ನೋ, ತೊರವೆ ರಾಮಾಯಣದ ಭಾಗಗಳನ್ನೋ ಗುನುಗಿಕೊಳ್ಳುವಾಗ ನಮ್ಮ ಓದು, ಕೆಲಸಗಳ ಮಧ್ಯ ಅಪ್ರಯತ್ನವಾಗಿ ಕೇಳಿಸಿಕೊಳ್ಳುತ್ತಿದ್ದುದೆಷ್ಟೋ ಅಷ್ಟೇ. ಅನೇಕ ಬಾರಿ ಅಪ್ಪ ನಮ್ಮನ್ನು ಕರೆದು ಕೂರಿಸಿ ಓದುತ್ತಿದ್ದರು. ಆಗ ಕೆಲವೊಮ್ಮೆ ಶಿಕ್ಷೆಯೆನಿಸುತ್ತಿತ್ತು. ಆದರೆ ಈಗ ಅವನ್ನು ನೆನೆಸಿಕೊಂಡಾಗ ಅಪ್ಪ-ಅಮ್ಮ ಎಂಥ ಮಹದುಪಕಾರ ಮಾಡುತ್ತಿದ್ದರು ಎನ್ನುವುದು ಅರಿವಾಗುತ್ತಿದೆ. ರಸವನ್ನು ಮನಃಪೂರ್ತಿಯಾಗಿ ಅನುಭವಿಸುವುದನ್ನು ತಿಳಿಸಿಕೊಟ್ಟರು. ಅನೇಕ ಬಾರಿ ಮನಸ್ಸಿಗೆ ಬೇಸರವಾದಾಗ, ಮನಸ್ಸು ಒತ್ತಡದಲ್ಲಿದ್ದಾಗ ಯೋಚನೆಯನ್ನು ಬೇರೆಡೆಗೆ ಹರಿಸಿ ಮನಸ್ಸು ಹಗುರ ಮಾಡಿಕೊಳ್ಳಲು ಪುಸ್ತಕಗಳು ಸಹಾಯಕ್ಕೆ ಒದಗುತ್ತಿದ್ದವು. ಎಂ ಎಸ್ಸಿ ಕೊನೆಯ ಸೆಮಿಸ್ಟರ್ ಪರೀಕ್ಷೆಯ ಹಿಂದಿನ ದಿನ ಬರೆಮನೆಯ ಶಾಂತ ವಾತಾವರಣದಲ್ಲಿ ಕುಳಿತು ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯ ಓದು ಮುಗಿಸಿದ್ದು ಒಂದು ಅತ್ಯಂತ ರಸಮಯ ನೆನಪು. ಶಿಕ್ಷಣಕ್ಕಾಗಿ ಮನೆಯಿಂದ ದೂರ ಹೋದರೂ ಓದು ನಿಲ್ಲಲಿಲ್ಲ. ಕೈಯ್ಯಲ್ಲಿದ್ದ ಹಣದ ಬಹುಭಾಗ ಪುಸ್ತಕಗಳನ್ನು ಕೊಳ್ಳುವುದಕ್ಕೇ ಖರ್ಚಾಗಿ ಬಿಡುತ್ತಿತ್ತು. ಸಣ್ಣವನಿದ್ದಾಗ ಯೋಚನೆಗಳ ಮೇಲೆ ತುಂಬಾ ಪರಿಣಾಮ ಬೀರಿದ್ದು ಯಂಡಮೂರಿಯಾದರೆ ಅನಂತರ ಗಾಢವಾಗಿ ಕಾಡಿದ್ದು ಭೈರಪ್ಪ. ಕೋರೋನ ಸಮಯದಲ್ಲಿ ದುರ್ಗಸಿಂಹನ ಪಂಚತಂತ್ರ ಓದಿ ಮುಗಿಸಿದ್ದು ಹಳಗನ್ನಡದ ಅನೇಕ ಶಬ್ದಗಳ ಪರಿಚಯವಾಗಲು ಕಾರಣವಾಯಿತು. ಸದ್ಯಕ್ಕೆ ಶತಾವಧಾನಿ ಆರ್ ಗಣೇಶ್, ಡಿವಿಜಿ ಮುಂತಾದ ಮಹನೀಯರ ಪುಸ್ತಕಗಳನ್ನೋದುವ ಪರ್ವ.

ಇನ್ನೂ ಓದಬೇಕು ಅಂದುಕೊಂಡ ಪುಸ್ತಕಗಳ ಪಟ್ಟಿಯ ಉದ್ದ ನೋಡುವಾಗ ಗಾಬರಿಯಾಗುತ್ತದೆ. ಬಹುಶಃ ಈ ಒಂದು ಜನ್ಮ ಸಾಲದೇನೋ. ಅದರಲ್ಲೂ ಕೈಯಲ್ಲಿ ಮೊಬೈಲ್ ಬಂದಮೇಲೆ ಈ ಸಂಶಯ ಸಕಾರಣವಾದದ್ದು ಅನಿಸುತ್ತಿದೆ.

-ಉಮಾಶಂಕರ ಕೇಳತ್ತಾಯ

Monday, July 10, 2023

ಭೂರಮಣಿ

 

                                                                                (ಚಿತ್ರ: ಅಮಿತಾ ಪುರಾಣಿಕ್)

ಮರಕತದ ನೆಲದಲ್ಲಿ ಹೊನ್ನ ಧೂಳಿಯ ಚೆಲ್ಲಿ
ಮುಗಿಲದೆರೆ ಮರೆಯಲ್ಲಿ ನಗುವ ಪ್ರಕೃತಿ|
ಘನನೀಲ ಕಾರ್ಮೋಡ ಕವಿದಿರುವ ಬಾನಿಗದೊ
ಚೇತನವ ನೀಡುತಿಹ ಪಸುರ ಸಂಗಾತಿ||
 
ಮಳೆಯ ಹನಿಯಿನಿಯನಂ ಮೌನದಲಿ ಕಾದಿರ್ದ
ಭೂರಮಣಿಗಲರರಳಿ ರೋಮಾಂಚನ|
ದೂರದಲಿ ಕಂಡವಳೆ ಸ್ವಾಗತಿಸೆ ಲಗುಬಗೆಯಿಂ
ಹಾಸಿಹಳೆ ಅರಿಶಿಣದ ಜಂಬುಖಾನ?||
 
                                                                                          - ಉಮಾಶಂಕರ್ ಕೆ

Wednesday, May 24, 2023

ವ್ಯಕ್ತಿವಿಭೂತಿ - ಒಂದು ಅನಿಸಿಕೆ


 

ಶತಾವಧಾನಿ ಆರ್ ಗಣೇಶರ ವ್ಯಕ್ತಿತ್ವ, ಅಗಾಧ ಜ್ಞಾನ, ನಿರರ್ಗಳ ವಾಗ್ಧಾರೆಗಳಿಗೆ ಮರುಳಾಗದ ಸಹೃದಯರು ಯಾರಿದ್ದಾರೆ? ಸನಾತನ ಧರ್ಮ, ಭಾರತೀಯ ಸಂಸ್ಕೃತಿ ಮುಂತಾದ ವಿಷಯಗಳು ಬರುವಾಗ ಭಾವುಕರಾಗುವ, ಕುಕವಿತೆ, ಕುಕವಿಗಳನ್ನು ನಿರ್ದಾಕ್ಷಿಣ್ಯವಾಗಿ ತೆಗಳುವ (ಅದನ್ನು ಗೈವ ಅರ್ಹತೆಯೂ ಇರುವ), ಕೆಲವೊಮ್ಮೆ ತನ್ನನ್ನೂ ಹಾಸ್ಯ ಮಾಡಿಕೊಂಡು ನಕ್ಕುಬಿಡುವ, ಅಮೋಘ ಕಲ್ಪನೆಗಳಿಂದ ಪುಷ್ಟವಾದ ಪದ್ಯಗಳನ್ನು ಲೀಲಾಜಾಲವಾಗಿ ಹೆಣೆದು ಆಶುವಾಗಿ ಹೇಳಬಲ್ಲ, ಮಹಾಭಾರತ, ರಾಮಾಯಣ, ಇತರ ಸಂಸ್ಕೃತ ಕಾವ್ಯಗಳು, ಯಾವುದೇ ಭಾಷೆಗಳ ಸಾಹಿತ್ಯ, ಛಂದಸ್ಸು, ವ್ಯಾಕರಣ ಮುಂತಾದವುಗಳ ಬಗೆಗೆ ಗಂಟೆಗಟ್ಟಲೆ ಮಾತನಾಡಬಲ್ಲ, ಮಾತನಾಡಿರುವ ಗಣೇಶರ ಬದುಕಿನ ಘಟ್ಟಗಳು, ವೇದಿಕೆಯಾಚೆಗಿನ ವ್ಯಕ್ತಿತ್ವ, ಅವರ ಸ್ನೇಹಿತರು, ಅವರ ಸಾಧನೆಗಳಿಗೆ ಕಾರಣವಾದ ಪ್ರಯತ್ನ, ಪ್ರೋತ್ಸಾಹಿಸಿದ ಹಿರಿಯರು ಇತ್ಯಾದಿಗಳ ಬಗ್ಗೆ ಕುತೂಹಲ ಬಹುಶಃ ಎಲ್ಲರಿಗೂ  ಸಹಜವಾಗಿಯೇ ಮೂಡಿರುತ್ತದೆ. ಈ ಅಂಶಗಳನ್ನು ನಮಗೆ ಆಪ್ತವಾಗಿ ತೆರೆದಿಡುವ ಪುಸ್ತಕ ವ್ಯಕ್ತಿವಿಭೂತಿ’. ಗಣೇಶರಿಗೆ ಆತ್ಮೀಯರಾದ, ಅನೇಕ ಕಾರ್ಯಗಳಲ್ಲಿ ಅವರ ಜತೆ ಕೈಜೋಡಿಸಿರುವ, ಇತ್ತೀಚೆಗಷ್ಟೇ ದೇವುಡು ನರಸಿಂಹಶಾಸ್ತ್ರಿಗಳ ಮಹಾಬ್ರಾಹ್ಮಣ ಕೃತಿಯನ್ನು ಅವರೊಂದಿಗೆ ಸಂಸ್ಕೃತದಲ್ಲಿ ಅನುವಾದಿಸಿ, ಅದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದ ಯುವವಿದ್ವಾಂಸ ಶಶಿಕಿರಣ್ ಬಿ ಎನ್ ರವರು ಇದರ ಕರ್ತೃ.

ಇರವು, ಅರಿವು, ಮತ್ತು ನಲವು ಎಂಬ ಮೂರು ಭಾಗಗಳಲ್ಲಿ ಗಣೇಶರ ಬದುಕಿನ ವಿವಿಧ ಆಯಾಮಗಳನ್ನು ನಮ್ಮ ಮುಂದಿಡುತ್ತದೆ, ಈ ಪುಸ್ತಕ. ಮೂರೂ ಭಾಗಗಳು ಬೇರೆ ಬೇರೆ ರೀತಿಯಲ್ಲಿ ಇಷ್ಟವಾಗುತ್ತವೆ. ಇರವುವಿನಲ್ಲಿ ಅವರ ಹುಟ್ಟು, ಬಾಲ್ಯ, ವಿದ್ಯಾರ್ಥಿ ಜೀವನ, ಮಾಡಿದ ವೃತ್ತಿಗಳು ಮುಂತಾದ ವಿವರಗಳಿವೆ. ಇವುಗಳ ಬಗ್ಗೆ ನನಗೆ ತುಂಬ ಕುತೂಹಲವಿದ್ದುದರಿಂದ ಈ ಭಾಗ ಇಷ್ಟವಾಯಿತು. ಲಂಕಾ ಕೃಷ್ಣಮೂರ್ತಿ, ರಂಗನಾಥ ಶರ್ಮಾ ಮುಂತಾದ ಮಹನೀಯರೊಡನೆ ಗಣೇಶರ ಒಡನಾಟದ ವಿವರಗಳು ಇನ್ನೂ ಹೆಚ್ಚು ಬೇಕಿತ್ತು ಎನಿಸಿತು. ಇವುಗಳ ಬಗ್ಗೆ ಗಣೇಶರೇ ಹಲವು ಕಡೆ ಬರೆದುಕೊಂಡಿರುವುದರಿಂದ ಇದೊಂದು ಲೋಪವೆನ್ನುವುದು ತಪ್ಪಾದೀತೇನೋ. ಮುಂದಿನ ಭಾಗ ಅರಿವು’, ಅವರಿಂದ ರಚಿತವಾಗಿರುವ ಪದ್ಯ, ಸಾಹಿತ್ಯ, ಕಾವ್ಯಗಳು ಮುಂತಾದ ಸಾರಸ್ವತ ಕಾರ್ಯಗಳ ಸಂಕ್ಷಿಪ್ತ ವಿವರವನ್ನು ಕೊಡುವುದಲ್ಲದೆ, ಅವಧಾನ ಕಲೆಗೆ ಅವರ ಕೊಡುಗೆಗಳನ್ನೂ ತಿಳಿಯಗೊಡುತ್ತದೆ. ಕೆಲವು ಕವಿತೆಗಳ ಶಬ್ದಾಲಂಕಾರ, ವರ್ಣನೆ, ಕಲ್ಪನೆಗಳು ನಮ್ಮನ್ನು ಮೂಕರನ್ನಾಗಿ ಮಾಡಿದರೆ ಕೆಲವು ಪದ್ಯಗಳ ಅರ್ಥಚಮತ್ಕಾರ ನಮ್ಮನ್ನು ವಿಸ್ಮಿತರನ್ನಾಗಿಸುತ್ತದೆ. ಆಂಗ್ಲ ಪದಗಳಾದ, ಅದರಲ್ಲೂ ಗಣಿತಕ್ಕೆ ಸಂಬಂಧಿಸಿದ ಸೈನ್, ಕೊಸೈನ್, ಟ್ಯಾನ್, ಕಾಟ್ ಪದಗಳನ್ನು ಅಳವಡಿಸಿ ಯುದ್ಧವನ್ನು ವರ್ಣಿಸುವ ಪದ್ಯ, ಚಿತ್ರಕಾವ್ಯದ ಒಂದು ಪ್ರಕಾರವಾದ ಗರ್ಭಚಿತ್ರದ ಉದಾಹರಣೆಗಳು, ಮೃತ್ಯುಜೀವನ, ಕುಂತೀಕ್ಲಾಂತಿ, ಧೂಮದೂತದ ಪದ್ಯ, ಕವಿ ಯಾರು ಎಂಬುದನ್ನು ವಿವರಿಸುವ ಪದ್ಯ, ಅಗ್ರಾಮ್ಯಮ್, ಹಿಮಾಲಯದ ಬಗೆಗಿನ ಅನ್ಯೋಕ್ತಿ ಮುಂತಾದ ಶಕ್ತ ಕವಿತೆಗಳನ್ನು ಓದುವಾಗ ಕೆಲವೊಮ್ಮೆ ಅಚ್ಚರಿಗೊಂಡರೆ ಮತ್ತೊಮ್ಮೆ ಆಘಾತಕ್ಕೊಳಗಾಗುತ್ತೇವೆ; ಒಮ್ಮೆ ಮನಸ್ಸು ಆರ್ದ್ರವಾದರೆ, ಮತ್ತೊಮ್ಮೆ ನಕ್ಕು ಪ್ರಸನ್ನವಾಗುತ್ತದೆ, ಇನ್ನೊಮ್ಮೆ ಗಂಭೀರವಾಗಿ ವೇದಾಂತ ಚಿಂತನೆ ಮಾಡುತ್ತದೆ. ಈ ಎಲ್ಲಾ ಭಾವಗಳನ್ನೂ ತಂದು ಸಹೃದಯರ ಮನಸ್ಸನ್ನು ತಟ್ಟುವ ಶಕ್ತಿ ಗಣೇಶರ ಕವಿತೆಗಳಿಗಿವೆ. ನನಗೆ ತುಂಬಾ ಇಷ್ಟವಾದ ಹಲವು ಪದ್ಯಗಳಲ್ಲಿ ಈ ಕೆಳಗಿನದೂ ಒಂದು. ಇದರ ಆರ್ದ್ರಭಾವ ಯಾರ ಮನವನ್ನೂ ಸೆರೆಹಿಡಿಯದಿರದು:

ಭಿಸ್ಸಾ ವಾ ಭಿಸ್ಸಟಾ ವಾ ಭವತಿ ಮದುದರೋಷರ್ಬುಧಕ್ಷೋಭ ಶಾಂತ್ಯೈ

ದುಗ್ಧಂ ವಾ ಮಾಸರೋ ವಾ ಶಮಯತಿ ನಿತರಾಂ ಮತ್ತೃಷಾಮ್ ವಾರಿ ವಾಪಿ|

ಕಂಥಾ ವಾ ರಾಂಕವಂ ವಾ ರಚಯತಿ ಶಯನಂ ಮತ್ಕೃತೇ ಮೇದಿನೀ ವಾ

ಕಿಂತು ಸ್ವಾಂತಸ್ಸಮೃದ್ಧ್ಯೈ ರಸಮಯಕವಿತಾಂ ಸಖ್ಯಯುಕ್ತಾಂ ಶ್ರಯೇsಹಮ್||’

 

(ಅಕ್ಕಿ ಕಾಳೊ ಬರಿ ಸೀಕಲನ್ನವೋ ಮಣಿಸ್ಯಾವು ಎನ್ನ ಹಸಿವ

ಹಾಲೊ, ಗಂಜಿಯೋ, ಬರಿದೆ ನೀರೊ ತಣಿಸ್ಯಾವು ಎನ್ನ ತೃಷೆಯ|

ಹರಕು ಬಟ್ಟೆಯೋ, ಶಾಲೊ, ನೆಲವೊ ಮಾಡ್ಯಾವು ಎನಗೆ ಮೆತ್ತೆ

ಆದರೆನ್ನ ಮನ ತಣಿಯೆ ಸಖರೊಡನೆ ಬೇಕು ರಸ್ಯಗವಿತೆ||)

 

ಕೊನೆಯ ಭಾಗವಾದ ನಲವು’, ಗಣೇಶರ ವ್ಯಕ್ತಿತ್ವವನ್ನು ಅವರ ಆತ್ಮೀಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ನಡೆದ ಕೆಲವು ಪ್ರಸಂಗಗಳ ಮೂಲಕ ಓದುಗರ ಮುಂದಿಡುತ್ತದೆ. ಅವರ ಮುಖಚಹರೆಯ ವರ್ಣನೆಯಿಂದ ಆರಂಭವಾಗುವ ಈ ಭಾಗ, ಲೇಖಕರ ಗಣೇಶರೊಂದಿಗಿನ ಮೊದಲನೆಯ ಭೇಟಿಯ ಸಂದರ್ಭವನ್ನು ವಿವರಿಸಿ ಅನಂತರ ಅವರ ಸ್ವಭಾವ, ನಡತೆಗಳನ್ನು ವಿವಿಧ ಘಟನೆಗಳ ಮೂಲಕ ತೆರೆದಿಡುತ್ತದೆ. ಕುಣಿಯಲು ಹೋಗಿ ಎಡವಟ್ಟು ಮಾಡಿಕೊಂಡಾಗಲೂ ಆಶುವಾಗಿ ಪದ್ಯ ಹೇಳಿದುದು, ಯುರೋಪ್ ಪ್ರವಾಸ, ರೈಲು ನಿಲ್ದಾಣದ ಪ್ರಸಂಗ, ರೂಪಾಯಿ ನೋಟುಗಳನ್ನು ಹರಿದುದು, ಶೃಂಗೇರಿಶ್ರೀಗಳ ಉಪಸ್ಥಿತಿಯಲ್ಲಿ ಅವಧಾನಗೈದುದು, ದುರ್ಗಾಸಪ್ತಶತಿಯ ಕುರಿತ ಭಾಷಣದ ಸಂದರ್ಭ, ಮುಂತಾದ ರಸಪ್ರಸಂಗಗಳು ಅವರ ಬದುಕಿನಲ್ಲಿ ಕಾವ್ಯವ್ಯಸನ, ನಸನಸೆಯ ಸ್ವಭಾವ, ಅವಸರ, ಸಮಯ ಪರಿಪಾಲನೆ, ಆತ್ಮವಿಶ್ವಾಸ, ವಿನಯ, ಸ್ನೇಹಗುಣ, ಹೃದಯವಂತಿಕೆ, ತಮಗೆ ನೆರವು ನೀಡಿದವರನ್ನು ಸದಾ ಸ್ಮರಿಸುವ ಕೃತಜ್ಞತೆ, ಅನ್ನರಾಸಿಕ್ಯ, ಸಂಗೀತಪ್ರಿಯತೆ ಇತ್ಯಾದಿಗಳನ್ನು ವಸ್ತುನಿಷ್ಠವಾಗಿ ವಿವರಿಸಿ ಅವರನ್ನು ನಮಗೆ ಆಪ್ತವಾಗಿಸುತ್ತವೆ.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಯುಟ್ಯೂಬ್ ಚಾನಲ್ ನಲ್ಲಿ ಭಾಷಣ, ಅವಧಾನಗಳಲ್ಲಿ ಶಶಿಕಿರಣರ ಮಾತಿನ ಮಾಧುರ್ಯವನ್ನು ಒಂದು ಬಾರಿ ಕೇಳಿದವರು ಮರೆಯಲಾರರು. ಸುಲಲಿತವಾಗಿ, ಸ್ಪಷ್ಟವಾಗಿ, ಸರಿಯಾದ ಕನ್ನಡ, ಸಂಸ್ಕೃತಶಬ್ದಗಳನ್ನು ಸರಿಯಾದ ಸ್ಥಳದಲ್ಲಿ ಬಳಸುತ್ತಾ ನಿರರ್ಗಳವಾಗಿ ಮಾತನಾಡುವ ಅವರು, ಈ ಕೃತಿಯಲ್ಲೂ ಅದನ್ನೇ ಅಳವಡಿಸಿಕೊಂಡಿದ್ದಾರೆ. ಇಡೀ ಕೃತಿಯಲ್ಲಿ ಲೇಖಕರು ಎಲ್ಲೂ ಗಣೇಶರನ್ನು ಕುರಿತು ಉತ್ಪ್ರೇಕ್ಷೆಗೈದಿಲ್ಲ ಎಂಬುದನ್ನು ಅಗತ್ಯವಾಗಿ ಹೇಳಬೇಕು. ಗಣೇಶರ ಕೋಪ, ಅವಸರ, ಮರೆವು ಮುಂತಾದ ಸ್ವಭಾವಗಳೂ ಇತರ ಸ್ವಭಾವಗಳಂತೆಯೇ ವಸ್ತುನಿಷ್ಠವಾಗಿ ನಮ್ಮ ಮುಂದಿಡಲ್ಪಟ್ಟಿವೆ. ವಸ್ತುತಃ, ಪುಸ್ತಕದ ಕೊನೆಯಲ್ಲಿ ಲೇಖಕರೇ ಹೇಳಿಕೊಂಡಂತೆ, ಗಣೇಶರ ವಿಷಯದಲ್ಲಿ ಅತಿಶಯೋಕ್ತಿಯೂ ಅಲಂಕಾರವೆನಿಸದು, ಎಲ್ಲ ಬಗೆಯ ಉಪಮೆಗಳೂ ನ್ಯೂನೋಪಮೆಯೇ ಆಗುವುವು.

ಒಟ್ಟಿನಲ್ಲಿ ನಮ್ಮ ಕಾಲದ ವಿದ್ವಲ್ಲೋಕದ ವಿಸ್ಮಯ ಗಣೇಶರ ಕುರಿತು ಪರಿಚಯಿಸುವ ಇಂಥ ಪುಸ್ತಕವೊಂದು ಅತ್ಯಗತ್ಯವಾಗಿ ಬೇಕಿತ್ತು ಎನ್ನುವುದಂತೂ ಸತ್ಯ. ಅದನ್ನು ಪೂರೈಸಿದ ಶಶಿಕಿರಣರಿಗೆ ನಮ್ಮ ಕೃತಜ್ಞತೆಗಳು ಅಗತ್ಯವಾಗಿ ಸಲ್ಲಬೇಕು.

                                                 - ಉಮಾಶಂಕರ್ ಕೆ

Wednesday, April 5, 2023

ರಾಮೋ ನಾಮ ಬಭೂವ

                                                                            (ಚಿತ್ರಕೃಪೆ: ಅಂತರ್ಜಾಲ)
 

“ರಾಮನೆಂಬವನು ಓರ್ವನಿರ್ದ” “ಹುಂ” “ಸೀತೆಯವನ ಸತಿ” “ಹುಂ”

“ಪಿತನ ಅಣತಿಯೊಲು ಕಾಡಲಲೆಯೆ ರಾವಣನು ಅವಳನೊಯ್ದಂ”|

ನಿದ್ರೆಗಾಗಿ ತಾಯ್ ಕಥೆಯ ಪೇಳೆ ಹುಂಕಾರದೊಡನೆ ಕೇಳೆ

“ಬಿಲ್ಲು ಲಕ್ಷ್ಮಣಾ ಬಿಲ್ಲುಬಿಲ್ಲೆಲ್ಲಿ?” ಎನುವರೆನಿದ್ದೆಮಾತು ಪೊರೆಗೆ||

                                                                                  (ಛಂದಸ್ಸು: ಸಂತುಲಿತ ಮಧ್ಯಾವರ್ತ ಗತಿ)

                                                                                                - ಮೂಲ: ಲೀಲಾಶುಕ

                                                                                 ಅನುವಾದ: ಉಮಾಶಂಕರ ಕೇಳತ್ತಾಯ 

 

ತಾತ್ಪರ್ಯ: ಬಾಲಕೃಷ್ಣನನ್ನು ಮಲಗಿಸಲು ಯಶೋದೆ ಕಥೆ ಹೇಳುತ್ತಿರುತ್ತಾಳೆ. ಅಂದು ರಾಮಾಯಣದ ಕಥೆಯನ್ನು ಹೇಳುತ್ತಾಳೆ. 

ಯಶೋದೆ: "ರಾಮ ಎಂಬವನೊಬ್ಬನಿದ್ದ."

ಕೃಷ್ಣ: "ಹುಂ."

ಯಶೋದೆ: "ಸೀತೆ ಅವನ ಮಡದಿ."

ಕೃಷ್ಣ: "ಹುಂ."

ಹೀಗೇ ಸೀತಾಪಹರಣದ ತನಕ ಕಥೆ ಮುಂದುವರೆಯುತ್ತದೆ. ಅಲ್ಲಿಯವರೆಗೂ ಕೃಷ್ಣನು ಅರೆನಿದ್ದೆಯಲ್ಲೇ 'ಹುಂ', 'ಹುಂ' ಎಂದು ಹೇಳುತ್ತಿದ್ದ. ಯಾವಾಗ ರಾವಣ ಸೀತೆಯನ್ನು ಕದ್ದೊಯ್ದ ಎಂದು ಯಶೋದೆ ಹೇಳಿದಳೋ, ಕೂಡಲೇ ಕೃಷ್ಣ ವ್ಯಗ್ರಗೊಂಡನಂತೆ. ಆಗ ಹೇಳಿದ 'ಲಕ್ಷ್ಮಣ, ನನ್ನ ಧನುಸ್ಸೆಲ್ಲಿ, ಧನುಸ್ಸೆಲ್ಲಿ, ಧನುಸ್ಸೆಲ್ಲಿ' ಎಂಬ ಕೃಷ್ಣನ ಮಾತುಗಳು ನಮ್ಮನ್ನು ರಕ್ಷಿಸಲಿ.

                 

        ಮೂಲಶ್ಲೋಕ:

ರಾಮೋನಾಮ ಬಭೂವ ಹುಂ ತದನುಗಾ ಸೀತೇತಿ ಹುಂ

ತೌ ಪಿತುರ್ನಿರ್ದೇಶಾತ್ ವಿಪಿನಾಶ್ರಯೇ ವಿಚರತಸ್ತಾಮಾಹರದ್ರಾವಣ:|

ನಿದ್ರಾರ್ಥಂ ಜನನೀಕಥಾಮಿತಿತದಾ ಹುಂಕಾರತ: ಶ್ರುಣ್ವತ:

ಸೌಮಿತ್ರೇ ಕ್ವ ಧನುರ್ಧನುರ್ಧನುರಿತಿ ವ್ಯಗ್ರಾಗಿರ: ಪಾಂತುವ:||