Thursday, September 15, 2022

ಮನೆ

 

                                                                                                           (ಚಿತ್ರಕೃಪೆ: ಅಂತರ್ಜಾಲ)

ಮನೆಯೊಂದು ಇರಬೇಕು
ಕೊಂಬೆಗಳ ಮರೆಯಲ್ಲಿ
ಹೊನ್ನಕ್ಕಿ ಬಚ್ಚಿಟ್ಟ ಗೂಡಿನಂತೆ|

ಜಗದೆಲ್ಲ ಗದ್ದಲವ-
ನೊಳಗಿನಿತು ಬಿಡದಂತೆ
ಇರಬೇಕು ಕಾನನದ ಸುತ್ತುಕೋಟೆ|

ಬೆಳಗಿನೆಳೆ ಬಿಸಿಲಿನಲಿ
ಪಿಕಳಾರ ಕುಟುರಗಳು
ಕುವರವ್ಯಾಸನ ಪದಕೆ ಶೃತಿಗೈಯಬೇಕು|

ಮಧ್ಯಾಹ್ನಕಾಲದಲಿ
ಚಿಗುರ ತಂಬುಳಿಯೂಟ
ಸವಿದು ತಂಪಿನ ನೆಲಕೆ ಒರಗಬೇಕು|

ಮುಸ್ಸಂಜೆ ಕವಿದಾಗ
ಗಂಭೀರ ಮೌನದಲಿ
ಮನವು ಶಾಂತಿಯ ಕಣಿವೆಗಿಳಿಯಬೇಕು|

ನಿಶೆಯಲೊಳಕೋಣೆಯಾ
ಬಿಸುಪಿನಲಿ ನಿದ್ರಿಸಿರೆ
ನಿನ್ನೆ ನಾಳೆಗಳನ್ನು ಮರೆಯಬೇಕು|

- ಉಮಾಶಂಕರ್ ಕೆ

ಭಯ

 

                                                                                            (ಚಿತ್ರಕೃಪೆ: ಅಂತರ್ಜಾಲ)

ಖಲೀಲ್ ಗಿಬ್ರಾನ್ ಬರೆದನೆಂದು ಹೇಳಲಾದ ಆಂಗ್ಲ ಪದ್ಯವೊಂದರ ಭಾವಾನುವಾದ, ಭೋಗಷಟ್ಪದಿಯಲ್ಲಿ:

ನದಿಯು ಹರಿದು ಬರುತ ತಿರುವ-
ಲಿದಿರು ಕಂಡ ಶರಧಿಯನ್ನು
ಮೊದಲಬಾರಿ ಕಾಣೆ ಭಯದೊಳದುರಿಬಿಡುವಳು|
ಮುದದಿ ಬಳುಕಿಯಿಳಿದ ಶಿಖರ-
ವದರ ತಳದಿ ಫಣಿಯ ತೆರದಿ
ಮದದೊಳುಕ್ಕಿ ಹರಿದ ಪಥವ ತಿರುಗಿ ನೋಳ್ಪಳು||

ಇದಿರು ಮೈಯ ಹರಡಿ ನಿಂತ
ಮದಿಸಿದಲೆಗಳಂಚ ಸೆರಗು
ಹೊದೆದ ಕಡಲ ಪೊಗುವುದೆಂದರಂತ್ಯವಲ್ಲವೇ?|
ಬದಲುಹಾದಿಯಿಲ್ಲವಾಯ್ತು
ಪದವ ಹಿಂದಕಿಡಲಸಾಧ್ಯ-
ವದನು ಜಗದೊಳೆಸಗಲಾರು ಶಕ್ತರಿರ್ಪರು?||

ಹೊಳೆಯು ಕಡಲ ಹೊಗಲೆಬೇಕು
ಅಲೆಗಳೊಡನೆ ಸೇರಬೇಕು
ಇಳೆಯ ನಿಯಮವಿದುವೆ ನೋಡ ಭಯವ ಗೆಲ್ಲಲು|
ಹೊಳೆಗೆ ಕಡಲ ಸೇರ್ಕೆಯದರ
ವಿಲಯವಲ್ಲ ಬದಲು ತಾನೆ
ಜಲಧಿಯಾಗಿ ಮಾರ್ಪುಗೊಳ್ವ ಶುಭದ ಗಳಿಗೆಯು||

                              

                            - ಮೂಲ: ಖಲೀಲ್ ಗಿಬ್ರಾನ್
                                            ಭಾವಾನುವಾದ - ಉಮಾಶಂಕರ್ ಕೆ.