Tuesday, October 25, 2022

ತಿಗಣೆಗಳ ಕಾಟ

ಸಂಸ್ಕೃತ ಶ್ಲೋಕವೊಂದನ್ನಾಧರಿಸಿ ಬರೆದ ಪದ್ಯ, ಸಾಂಗತ್ಯದಲ್ಲಿ:

ನಿದ್ರಿsಪಳ್ ಲಕ್ಷ್ಮಿsಯುs ಕಂಜsದೊಳ್ ಹರನೋ ಹಿs-
ಮಾದ್ರಿsಯೊಳ್ ಹರಿಯುs ಪಾಲ್ಗಡಲೊಳ್|
ನಿದ್ರಿsಪರ್ ದೇವರ್ಕsಳಾದsರೇಂ ತಿಗಣೆsಯುs-
ಪದ್ರsವs ಸಹಿಪsರೇನಕಟಾ!||

(ಲಕ್ಷ್ಮಿಯು ಕಮಲದಲ್ಲೂ, ಶಿವನು ಹಿಮಾಲಯದಲ್ಲೂ ಮತ್ತು ವಿಷ್ಣುವು ಹಾಲಿನ ಸಮುದ್ರದಲ್ಲೂ ನಿದ್ರಿಸುತ್ತಾರೆ. ಇವರೆಲ್ಲಾ ದೇವರಾದರೇನಂತೆ? ತಿಗಣೆಗಳ ಕಾಟವನ್ನು ಸಹಿಸಬಲ್ಲರೇ?)

(ಮೂಲ: ಕಮಲೇ ಕಮಲಾ ಶೇತೇ ಹರ: ಶೇತೇ ಹಿಮಾಲಯೇ|
ಕ್ಷೀರಾಬ್ಧೌ ಚ ಹರಿ: ಶೇತೇ ಮನ್ಯೇ ಮತ್ಕುಣ ಶಂಕಯಾ||

ಲಕ್ಷ್ಮಿಯು ಕಮಲದಲ್ಲೂ, ಶಿವನು ಹಿಮಾಲಯದಲ್ಲೂ ಮತ್ತು ವಿಷ್ಣುವು ಹಾಲಿನ ಸಮುದ್ರದಲ್ಲೂ ನಿದ್ರಿಸುತ್ತಾರೆ. ತಿಗಣೆಗಳ ಭಯವೇ ಇದಕ್ಕೆ ಕಾರಣವಿರಬೇಕು.)

- ಉಮಾಶಂಕರ್ ಕೆ

ದೀಪಾವಳಿ

 

                                                                                                                      (ಚಿತ್ರಕೃಪೆ: ಅಂತರ್ಜಾಲ)

ಸುತ್ತಲೂ ಬೆಳದಿಂಗಳು ಸುರಿಯುತ್ತಿರುವಾಗ, ರಾತ್ರಿಯ ಹಿಮದ ಮೈಯನ್ನು ಮೃದುವಾಗಿ ಸವರಿಕೊಂಡು ತೂರಿ ಬಂದ ತಂಗಾಳಿ ತೆಂಗಿನ ಗರಿಗಳನ್ನು ಪಟಪಟನೆ ಪ್ರಕಂಪಿಸುವಂತೆ ಮಾಡಿದಾಗ ಎಂದಾದರೂ ಹುಸೇನಿ ರಾಗವನ್ನು ಕೇಳಿದ್ದೀಯಾ? ಸ್ವಾತಿ ತಿರುನಾಳರ 'ಕನಕಮಯಮಾಯಿಡುಂ' ರಚನೆಗೆ ಗಾಳಿಯೂ ತನ್ನ ಬಿಸಿಯನ್ನು ಕಳೆದುಕೊಂಡು ತಂಪಾಗಿ ಮೈತೀಡುತ್ತದೆ. ಬೆಳದಿಂಗಳ ಕನಕಾಭಿಷೇಕದಲ್ಲಿ ಮಿಂದು ಹೊಳೆಯುತ್ತಿರುವ ತೆಂಗಿನ ಹೆಡಲುಗಳು ರಾತ್ರಿಯ ಆ ಸ್ತಬ್ಧತೆಯಲ್ಲಿ ನಿಧಾನವಾಗಿ ತಲೆದೂಗಲಾರಂಭಿಸುತ್ತವೆ. ‘ಕುಳಿರ್ ಮತಿ’ಯು ನಿಜವಾಗಿಯೂ ಕಲಭಗತಿಯಲ್ಲಿ ಸಂಚರಿಸತೊಡಗುತ್ತಾನೆ. ಅಷ್ಟು ಹೊತ್ತಿಗೆ ಅಲ್ಲೆಲ್ಲೋ ಎಲೆಮರೆಯಲ್ಲಿ ಮುಖಮರೆಸಿಕೊಂಡಿದ್ದ ಕಾಡುಮಲ್ಲಿಗೆಯ ಮೊಗ್ಗೊಂದು ಮೌನವಾಗಿ ವಿಕಸಿತಗೊಂಡು ತನ್ನ ಪರಿಮಳದಿಂದಲೇ ನನ್ನನ್ನು ಸುತ್ತುವರೆದು ಬಿಡುತ್ತದೆ. ಇಂತಹ ಮತ್ತೇರಿಸುವ ನಿಶಾಕಾಲದಲ್ಲಿ ಕೆಲವೊಮ್ಮೆ ಗಂಟೆಗಟ್ಟಲೆ ನೀರವವಾಗಿ ಕುಳಿತು ಆಲೋಚಿಸುತ್ತಿದ್ದುದುಂಟು. ಆಗೆಲ್ಲಾ ನೀನು ನೆನಪಿಗೆ ಬರುತ್ತಿದ್ದೆ. ಹುಸೇನಿ ರಾಗದ ಮೋಹಕಗಂಭೀರ ಏರಿಳಿತಗಳು, ಪಲುಕುಗಳು ನಿನ್ನ ನೆನಪಿನ ತಂತಿಗಳನ್ನು ಮೀಟಿ ರಾಗತರಂಗಗಳನ್ನೆಬ್ಬಿಸುವಷ್ಟು ಶಕ್ತವಾಗಿದ್ದವು; ಆಗ ನಾನು ನಿನಗೆ, ನೀನು ನನಗೆ ಪರಿಚಯವಿಲ್ಲದಿದ್ದರೂ ಸಹ.

ನಾಳೆ ದೀಪಾವಳಿ ಹಬ್ಬವಂತೆ.

ಮೌನವಾಗಿ ಅದೇತರಲ್ಲೊ ಮಗ್ನನಾಗಿದ್ದಾಗ, ಪುಟ್ಟ ಮಗುವಿನಂತೆ ಓಡಿಬಂದು ಕಣ್ಣುಗಳಲ್ಲಿ ಸಡಗರವನ್ನುಕ್ಕಿಸುತ್ತಾ ಕೈಯಾಡಿಸಿ ಮಾತನಾಡಿಸುತ್ತಿದ್ದೆ. ಯಾವುದೋ ಬೇಸರದಲ್ಲಿ ಮ್ಲಾನನಾಗಿದ್ದಾಗ ‘ಇವಳು ಇಷ್ಟೊಂದು ಬೆಳೆದದ್ದು ಯಾವಾಗ?’ ಎಂದು ಅಚ್ಚರಿ ಪಡುವಂತೆ ಸಮಾಧಾನ ಹೇಳುತ್ತಿದ್ದೆ. ಅದೇನೋ ತುಂಟತನದ ಹಾಸ್ಯಚಟಾಕಿ ಹಾರಿಸಿದ್ದಕ್ಕೆ ಅಂದೊಮ್ಮೆ ನಗುನಗುತ್ತಲೇ ಸಿಹಿಯಾಗಿ ತರಾಟೆಗೆ ತೆಗೆದುಕೊಂಡಿದ್ದೆಯಲ್ಲಾ.. ಅದನ್ನು ಮತ್ತೆ ಮತ್ತೆ ನೆನೆದು ಅದೆಷ್ಟು ಸವಿದಿದ್ದೇನೆ ಗೊತ್ತಾ? ಬೈಗುಳವೂ ಅಷ್ಟೊಂದು ಆಹ್ಲಾದಕರವಾಗಿರಬಹುದೆಂದು ನಾನು ತಿಳಿದದ್ದು ಅಂದೇ. ನಿನ್ನ ಗೆಜ್ಜೆಗಳ ಝಲ್ ಝಲ್ ಧ್ವನಿಯನ್ನು ಮನಸ್ಸು ಹಿಂಬಾಲಿಸುತ್ತಿದ್ದರೂ ಕೆಲಸದಲ್ಲಿ ಮಗ್ನನಾಗಿರುವಂತೆ ನಟಿಸುತ್ತಿದ್ದೆ. ನೀನೆಂದರೆ ಅದೇನೋ ಸಡಗರ..

ನಿನ್ನ ಕಣ್ಣುಗಳೇ ಅದೆಷ್ಟೋ ಸಲ ದೀಪವಾಗಿ ಆರತಿ ಬೆಳಗುತ್ತಿರುವುದನ್ನು ಕಂಡಿದ್ದೇನೆ.. ನಗರದ ಬಣ್ಣಬಣ್ಣದ ಪ್ರಖರ ದೀಪಗಳ ನಡುವೆ ಅವೆಲ್ಲಕ್ಕಿಂತಲೂ ಪ್ರೋಜ್ವಲವಾಗಿ ಮಿನುಗುವ ನಿನ್ನ ಕಣ್ಣುಗಳು ನನ್ನತ್ತ ನೋಡುತ್ತಿರುವುದನ್ನು ಗಮನಿಸಿದ್ದೇನೆ.. ಇದೋ ಮತ್ತೆ ಹೇಳುತ್ತಿದ್ದೇನೆ: ನಿನ್ನ ಕಣ್ಣುಗಳಲ್ಲಿರುವ ದೀಪಗಳ ಹಾವಳಿಯನ್ನು ಅನುಭವಿಸಲು ಮನಸ್ಸು ಮತ್ತೆ ಮತ್ತೆ ಬಯಸುತ್ತಿದೆ. ಅದರಿಂದ ತಪ್ಪಿಸಿಕೊಳ್ಳಲು ಅದೇಕೋ ಮನಸ್ಸೇ ಬರುತ್ತಿಲ್ಲ. ದೀಪಾವಳಿ ಎಂದರೆ ದೀಪಗಳ ಸಮೂಹ ಎಂದು ಅರ್ಥವಂತೆ. ದೀಪಾವಳಿ ಹಬ್ಬವೆಂದರೆ ಬೆಳಕಿನ ಹಬ್ಬ.

ನಿನ್ನ ಜೊತೆಯಲ್ಲಿರುವವರೆಗೂ ನನಗೆ ಶಾಶ್ವತವಾಗಿ ದೀಪಾವಳಿಯೇ ತಾನೇ..!

ಹಬ್ಬದ ಶುಭಾಶಯಗಳು.

- ಉಮಾಶಂಕರ್ ಕೆ 

Tuesday, October 4, 2022

ಸ್ವರ್ಣಪಥ

                                                                                            (ಚಿತ್ರ: ಉಮಾಶಂಕರ ಕೇಳತ್ತಾಯ)
 

ಅಲ್ಲಿ ಹೊನ್ನಿನ ಬಟ್ಟೆಯೊಳ್ಮನವಾಡಲಾಟಿಪುದೇತಕೋ
ಅಲ್ಲಿ ಬೆಂಕಿಯುಗುಳ್ವ ಸೂರ್ಯನ ಮುಟ್ಟಲೇತಕೆ ಪಾರ್ವುದೋ|
ಕಲ್ಲಿನಂತೆಯೆ ಶಾಂತಿಯಿಂ ಕರಮೊಪ್ಪದೇತಕೆ ಪಾಳ್ಮನಂ
ಬಲ್ಲೆಯೇಂ ತವಶೌರ್ಯ ಕೇಳ್ವುದು ಬಲ್ಲ ಬುದ್ಧಿಯ ಸಖ್ಯಮಂ|| 
                                                
                                               (ಮಲ್ಲಿಕಾಮಾಲಾವೃತ್ತ) 
                                         - ಉಮಾಶಂಕರ ಕೇಳತ್ತಾಯ

ಆ ಬಂಗಾರದ ಬಣ್ಣದ ಹಾದಿಯಲ್ಲಿ ಮನಸ್ಸೇಕೆ ಆಡಲು ಬಯಸುತ್ತಿದೆಯೋ!
ಆ ಬೆಂಕಿಯ ಉಂಡೆಯಾಗಿರುವ ಸೂರ್ಯನನ್ನುಮುಟ್ಟಲು ಮನಸ್ಸೇಕೆ ಹಾರುತ್ತಿದೆಯೋ!
ಈ ಹಾಳು ಮನಸ್ಸೇಕೆ ಕಲ್ಲಿನಂತೆ ಮೌನವಾಗಿ ಶಾಂತಿಯಿಂದ ಕುಳಿತುಕೊಳ್ಳುವುದಿಲ್ಲ?
ಮನಸ್ಸೇ.. ನಿನ್ನ ಶೌರ್ಯವು ವಿವೇಕದ ಜತೆಯನ್ನು ಕೇಳುತ್ತದೆ.