Wednesday, April 5, 2023

ರಾಮೋ ನಾಮ ಬಭೂವ

                                                                            (ಚಿತ್ರಕೃಪೆ: ಅಂತರ್ಜಾಲ)
 

“ರಾಮನೆಂಬವನು ಓರ್ವನಿರ್ದ” “ಹುಂ” “ಸೀತೆಯವನ ಸತಿ” “ಹುಂ”

“ಪಿತನ ಅಣತಿಯೊಲು ಕಾಡಲಲೆಯೆ ರಾವಣನು ಅವಳನೊಯ್ದಂ”|

ನಿದ್ರೆಗಾಗಿ ತಾಯ್ ಕಥೆಯ ಪೇಳೆ ಹುಂಕಾರದೊಡನೆ ಕೇಳೆ

“ಬಿಲ್ಲು ಲಕ್ಷ್ಮಣಾ ಬಿಲ್ಲುಬಿಲ್ಲೆಲ್ಲಿ?” ಎನುವರೆನಿದ್ದೆಮಾತು ಪೊರೆಗೆ||

                                                                                  (ಛಂದಸ್ಸು: ಸಂತುಲಿತ ಮಧ್ಯಾವರ್ತ ಗತಿ)

                                                                                                - ಮೂಲ: ಲೀಲಾಶುಕ

                                                                                 ಅನುವಾದ: ಉಮಾಶಂಕರ ಕೇಳತ್ತಾಯ 

 

ತಾತ್ಪರ್ಯ: ಬಾಲಕೃಷ್ಣನನ್ನು ಮಲಗಿಸಲು ಯಶೋದೆ ಕಥೆ ಹೇಳುತ್ತಿರುತ್ತಾಳೆ. ಅಂದು ರಾಮಾಯಣದ ಕಥೆಯನ್ನು ಹೇಳುತ್ತಾಳೆ. 

ಯಶೋದೆ: "ರಾಮ ಎಂಬವನೊಬ್ಬನಿದ್ದ."

ಕೃಷ್ಣ: "ಹುಂ."

ಯಶೋದೆ: "ಸೀತೆ ಅವನ ಮಡದಿ."

ಕೃಷ್ಣ: "ಹುಂ."

ಹೀಗೇ ಸೀತಾಪಹರಣದ ತನಕ ಕಥೆ ಮುಂದುವರೆಯುತ್ತದೆ. ಅಲ್ಲಿಯವರೆಗೂ ಕೃಷ್ಣನು ಅರೆನಿದ್ದೆಯಲ್ಲೇ 'ಹುಂ', 'ಹುಂ' ಎಂದು ಹೇಳುತ್ತಿದ್ದ. ಯಾವಾಗ ರಾವಣ ಸೀತೆಯನ್ನು ಕದ್ದೊಯ್ದ ಎಂದು ಯಶೋದೆ ಹೇಳಿದಳೋ, ಕೂಡಲೇ ಕೃಷ್ಣ ವ್ಯಗ್ರಗೊಂಡನಂತೆ. ಆಗ ಹೇಳಿದ 'ಲಕ್ಷ್ಮಣ, ನನ್ನ ಧನುಸ್ಸೆಲ್ಲಿ, ಧನುಸ್ಸೆಲ್ಲಿ, ಧನುಸ್ಸೆಲ್ಲಿ' ಎಂಬ ಕೃಷ್ಣನ ಮಾತುಗಳು ನಮ್ಮನ್ನು ರಕ್ಷಿಸಲಿ.

                 

        ಮೂಲಶ್ಲೋಕ:

ರಾಮೋನಾಮ ಬಭೂವ ಹುಂ ತದನುಗಾ ಸೀತೇತಿ ಹುಂ

ತೌ ಪಿತುರ್ನಿರ್ದೇಶಾತ್ ವಿಪಿನಾಶ್ರಯೇ ವಿಚರತಸ್ತಾಮಾಹರದ್ರಾವಣ:|

ನಿದ್ರಾರ್ಥಂ ಜನನೀಕಥಾಮಿತಿತದಾ ಹುಂಕಾರತ: ಶ್ರುಣ್ವತ:

ಸೌಮಿತ್ರೇ ಕ್ವ ಧನುರ್ಧನುರ್ಧನುರಿತಿ ವ್ಯಗ್ರಾಗಿರ: ಪಾಂತುವ:||

Wednesday, March 15, 2023

ಹೋಳಿ ಹುಣ್ಣಿಮೆ

 

 

                                                                                             (ಚಿತ್ರ: ಉಮಾಶಂಕರ ಕೇಳತ್ತಾಯ)

ಅರರೆ ಪರಶಿವನ ಶಿರದ ಮೇಲಣ ಬಾಲಚಂದ್ರನಿಂದು
ಕುವರನಾಗಿ ಹರಜಟಾಜೂಟದೊಳಗಾಡುತಿಹನೊ ಇಂತು|
ಹೋಲಿಕಾದಹನಧೂಮ ಹಬ್ಬಿಹುದೆ ವ್ಯೋಮವನ್ನು ತುಂಬಿ
ಅಲ್ಲ ರಕ್ಕಸರು ಗುಂಪುಗಟ್ಟಿಹರೊ ಮಧುಪಾತ್ರೆಯೆಂದು ನಂಬಿ?|| 

 

Is bAlacandra, the ornament of lord Shiva, grown up and playing amidst the tangled hair of Shiva? 

Is the sky covered by the smoke that rose from the hOlikAdahana? 

Or are they Asuras who gathered around the moon, thinking that it is the bowl of wine?

 

- ಉಮಾಶಂಕರ ಕೇಳತ್ತಾಯ

Thursday, February 2, 2023

ನಿಕ್ಷಿಪ್ತ ಭಾಂಡ


  
 
ನಕ್ಷತ್ರದರಳುಗಳ ಹುರಿಯೆ ನಿಶೆ ಮರೆತಿರಲು
ಪ್ರಕ್ಷುಬ್ಧವುಡುಗಣವು ಸಿಡಿದು ಬಿಸಿಯಾರೆ|
ವಿಕ್ಷಿಪ್ತಗೊಂಡಿಹವು ಹೊಳೆದು ಮಸಿನೆಲದಲ್ಲಿ
ನಿಕ್ಷಿಪ್ತ ಭಾಂಡವದು ಹೊತ್ತಿ ಕೆಂಪೇರೆ!||

- ಉಮಾಶಂಕರ್ ಕೆ

Saturday, November 26, 2022

ನದಿ ಮತ್ತು ಕಾಡು


                                                                                   (ಚಿತ್ರ: ಉಮಾಶಂಕರ್ ಕೆ)

"ನದಿಯಾಗಬೇಕಿತ್ತು ನಾನು, ನಿನ್ನಂತೆ"
ಕಾಡೊರೆಯಿತು ಓಡುತ್ತಿದ್ದ ನದಿಗೆ,
"ನದಿಯಾಗಬೇಕಿತ್ತು ನಾನು, ನಿನ್ನಂತೆ
ಯಾವಾಗಲೂ ಓಡುತ್ತಾ
ನಿತ್ಯ ಹೊಸ ದೃಶ್ಯಗಳ ನೋಡುತ್ತಾ
ಸಾಗರವ ಸೇರುತ್ತಾ
ಇರಬೇಕಿತ್ತು ನಾನೂ, ಉತ್ಸಾಹದಿಂದ ಸಾಗುತ್ತಾ
ನೀರಾದ ಬೆಳಕಂತೆ ಹರಿಯುತ್ತಾ
ನಿರಂತರ ಅಲೆಯುತ್ತಾ..."

"ಆದರೆ ನಾನು!? ಕೇವಲ ಸೆರೆಯಾಳು
ಬಂಧಿಸಲ್ಪಟ್ಟಿದ್ದೇನೆ ಭುವಿಗೆ,
ಬೆಳೆದು ಹಳತಾಗುತ್ತೇನೆ ನಾನು ಮೌನದಲ್ಲಿ;
ಅದರಲ್ಲೇ ನನ್ನ ಜೀವನ,
ನಿಶ್ಶಬ್ದದಲ್ಲೇ ಲೀನವಾಗುತ್ತೇನೆ ನಾನು.
ವರುಷಗಳ ನಂತರ ನನ್ನದೇನೂ ಉಳಿಯುವುದಿಲ್ಲ;
ಇಲ್ಲ! ಉಳಿಯುವುದು ಮುಷ್ಟಿ ತುಂಬ ಬೂದಿ"

"ಕಾಡಾಗಬೇಕಿತ್ತು ನಾನು, ನಿನ್ನಂತೆ"
ಅಲವತ್ತುಗೊಂಡಿತು ನದಿಯು
"ಕಾಡಾಗಬೇಕಿತ್ತು ನಾನು, ನಿನ್ನಂತೆ,
ಇರುತ್ತೀಯ ನೀನು ಅಂತರ್ಮುಖಿಯಂತೆ
ನಿದ್ದೆಯೋ? ಎಚ್ಚರವೋ?
ಸುತ್ತಲಿದೆ ಮಡುಗಟ್ಟಿದ ಮಹನ್ಮೌನ
ಆಹ್ಲಾದವಾಗಿದೆ ಅಗಾಧ ಏಕಾಂತತೆ
ಇದ್ದೀಯ ನೀನು ಹಸಿರು ವಜ್ರದಂತೆ,
ಬೆಳದಿಂಗಳಲ್ಲಿ ಬೆಳಗುತ್ತಾ
ಅರಿವಿಗೆಟುಕದ ರಹಸ್ಯವ ಪಿಸುಗುಡುತ್ತಾ.

ವರ್ಣಮಯ ವಸಂತದ ಮುಕುರ ನೀನು
ಪ್ರತಿಫಲಿಸುತ್ತದರ ಬೆಡಗು-ಅಂದಗಳನ್ನು
ಪ್ರತಿವರುಷವೂ ಹೊಸತನವೆ ನಿನ್ನ ಭವಿತವ್ಯ
ಪ್ರೇಮಿಗಳಿಗೆ ನೀನೊಂದು ನೆರಳಿನಾಶ್ರಯ.
ನನ್ನನ್ನು ನೋಡು! ಯಾವಾಗಲೂ ಓಡುತ್ತಾ
ನನ್ನಿಂದಲೂ ದೂರ, ಬಹಳಷ್ಟು ದೂರ
ಓಟ, ಅಗಾಧ ಓಟ, ದಿಗ್ಭ್ರಮೆಯ ಅಲೆದಾಟ
ಸಿಕ್ಕಿದ್ದು ಏನಿಲ್ಲ ಅರ್ಥವಿಲ್ಲದೀ ಓಟದಿಂದ
ಕನಸಾಯಿತಿನ್ನೆಂದು ಅನಂತ ಶಾಂತಿ
ಛೇ! ಕಾಡಾಗಬೇಕಿತ್ತು ನಾನು ನಿನ್ನಂತೆ"

ತಿಳಿಯಲಾರವು ಇನ್ನೊಬ್ಬರ ಮನದ ಭಾವಗಳು
ಕೇಳುವವರಾರು ಅವನ ಅಸ್ತಿತ್ವ ನಿಜವೇ
ಇಲ್ಲಾ, ಅವನೊಂದು ನೆರಳೇ?
ನಸುಗತ್ತಲಲಿ ಗುರಿಯಿಲ್ಲದೇ
ನಡೆಯುತ್ತದ್ದವನೊಬ್ಬ ತನ್ನನ್ನು
ತಾನೇ ಕೇಳಿಕೊಂಡ- "ನಾನು ಯಾರು?
ನದಿಯೇ? ಕಾಡೇ? ಇಲ್ಲಾ ಇವೆರಡೂ?
ನದಿ ಹಾಗೂ ಕಾಡು?
ನದಿ ಮತ್ತು ಕಾಡು.


                                                                                            ಮೂಲ: ಜಲಾಲುದ್ದೀನ್ ರೂಮಿ
                                                                                            ಅನುವಾದ: ಉಮಾಶಂಕರ್. ಕೆ

ಒಂದಾನೊಂದು ಕಾಲದಲ್ಲಿ...

 

                                                                                                         (ಚಿತ್ರ: ಉಮಾಶಂಕರ್ ಕೆ)

ಒಂದಾನೊಂದು ಕಾಲದಲ್ಲಿ, ಕಂದಾ,
ಜನರು ಹೃದಯಪೂರ್ವಕವಾಗಿ ನಗುತ್ತಿದ್ದರು,
ಅವರ ಕಣ್ಣುಗಳು ಮಿನುಗುತ್ತಿದ್ದವು.
ಆದರೆ ಈಗ? ಅವರೆಲ್ಲಾ ಬರೇ
ಹಲ್ಲುಗಳಿಂದ ನಗುತ್ತಿದ್ದಾರೆ,
ಅವರ ಮಂಜುಗಡ್ಡೆಯಂತಹ ಕಣ್ಣುಗಳು
ನನ್ನ ನೆರಳಿನ ಹಿಂದೆ ಏನನ್ನೋ ಶೋಧಿಸುತ್ತಿರುತ್ತವೆ.

ಅದೊಂದು ಕಾಲವಿತ್ತು, ಕಂದಾ,
ಜನರು ಹಸ್ತಲಾಘವದೊಂದಿಗೆ
ಹೃದಯವನ್ನೂ ಸೇರಿಸುತ್ತಿದ್ದರು.
ಈಗ ಆ ಕಾಲ ಮುಗಿದುಹೋಯಿತು..
ಅವರೆಲ್ಲಾ ಹೃದಯಹೀನವಾಗಿ
ಹಸ್ತಲಾಘವ ಮಾಡುತ್ತಿದ್ದಾರೆ; ಮಾತ್ರವಲ್ಲ,
ಅವರ ಎಡಗೈ ನನ್ನ ಖಾಲಿ ಜೇಬುಗಳನ್ನು ತಡವುತ್ತಿರುತ್ತದೆ.

"ಇದು ನಿಮ್ಮ ಮನೆಯೆಂದೇ ತಿಳಿಯಿರಿ"
"ಇನ್ನೊಮ್ಮೆ ಬರಲೇಬೇಕು"ಎಂದೆಲ್ಲಾ ಹೇಳುತ್ತಾರೆ.
ಹಾಗೆಂದು ನಾನು ಒಂದೆರಡು ಸಲ ಹೋದರೆ
ಮೂರನೇ ಬಾರಿ ಅವರ ಮನೆಬಾಗಿಲು
ನನ್ನ ಪಾಲಿಗೆ ಮುಚ್ಚಿರುತ್ತದೆ..

ಇವರಿಂದೆಲ್ಲಾ ನಾನು ತುಂಬಾ ಕಲಿತೆ ಕಂದಾ..
ಅನೇಕ ಮುಖವಾಡಗಳನ್ನು ತೊಡುವುದನ್ನು ಕಲಿತೆ,
ಅವುಗಳನ್ನು ಬಟ್ಟೆಗಳಂತೆ
ಬದಲಾಯಿಸುವುದನ್ನು ಕಲಿತೆ,
ಮನೆಗೊಂದು ಮುಖವಾಡ,
ಆಫೀಸಿಗೊಂದು ಮುಖವಾಡ,
ದಾರಿಯಲ್ಲೊಂದು, ಅತಿಥಿಯಾಗಿರುವಾಗ ಇನ್ನೊಂದು,
ಪಾರ್ಟಿಗಳಲ್ಲಿ ಮತ್ತೊಂದು.. ಹೀಗೆ..
ಒಂದು ನಿಗದಿತ ನಗುವನ್ನು ಮುಖದಲ್ಲಿ
ಬರಿಸಿಕೊಳ್ಳುವುದನ್ನು ಕಲಿತೆ,
ಅಷ್ಟೇ ಅಲ್ಲ ಮಗೂ.. ಬರೇ ಹಲ್ಲುಗಳಿಂದ
ನಗುವುದನ್ನು ಕಲಿತೆ,
ಹೃದಯರಹಿತವಾಗಿ ಷೇಕ್ ಹ್ಯಾಂಡ್
ಮಾಡುವುದನ್ನು ಕಲಿತೆ,
ಮಾತ್ರವಲ್ಲ, 'ಅಬ್ಬಾ! ಪಾರಾದೆ' ಎಂದುಕೊಳ್ಳುತ್ತಾ
'ಶುಭವಿದಾಯ'.ಹೇಳುವುದನ್ನೂ ಕಲಿತೆ.
ಸಂತಸವಾಗದಿದ್ದರೂ "ನಿಮ್ಮನ್ನು
ಭೇಟಿಯಾದದ್ದು ತುಂಬಾ ಸಂತೋಷ" ಎನ್ನಲು ಕಲಿತೆ,
ಮಾತೆಲ್ಲಾ ಕೇಳಿ ಸಾಕಾದಮೇಲೂ
"ನಿಮ್ಮಲ್ಲಿ ಮಾತಾಡುವುದೆಂದರೆ ಖುಷಿಯ ವಿಚಾರ"
ಎನ್ನಲು ಕಲಿ
ತೆ.


ಆದರೆ ದಯವಿಟ್ಟು ನನ್ನನ್ನು ನಂಬು ಕಂದಾ..
ನಿನ್ನಂತಿರುವಾಗ ನಾನು ಹೇಗಿದ್ದೆನೋ ಮತ್ತೆ
ಹಾಗಾಗಬೇಕೆಂದುಕೊಂಡಿದ್ದೇನೆ.
ಈ ಭಾವನಾರಹಿತ ವಿಷಯಗಳನ್ನೆಲ್ಲಾ
ಮರೆಯಬೇಕೆಂದಿದೆ.
ನಗುವುದನ್ನು ಮತ್ತೆ
ಹೊಸದಾಗಿ ಕಲಿಯಬೇಕೆಂದಿದೆ ಕಂದಾ..
ಯಾಕೆ ಗೊತ್ತಾ..?
ನಾನು ಕನ್ನಡಿಯೆದುರು ನಿಂತು ನಕ್ಕರೆ ನನ್ನ
ಹಲ್ಲುಗಳೆಲ್ಲಾ ಹಾವಿನ ದಂತಗಳಂತೆ ಕಾಣುತ್ತವೆ ಮಗೂ..

ಆದ್ದರಿಂದ ಹೇಗೆ ನಗುವುದೆಂದು ನನಗೆ
ಕಲಿಸುತ್ತೀಯಾ...?
ನಾನು ನಿನ್ನಂತಿರುವಾಗ ಹೇಗೆ ನಗುತ್ತಿದ್ದೆನೆಂಬುದನ್ನು
ಹೇಳಿಕೊಡುತ್ತೀಯಾ..? ■

ಗೇಬ್ರಿಯೆಲ್ ಓಕಾರಾ ಬರೆದ ಸುಪ್ರಸಿದ್ಧ ಕವನ 'Once upon a time' ನ ಭಾವಾನುವಾದ.
                                                                                     
                                                                                                        ಮೂಲ: ಗೇಬ್ರಿಯೆಲ್ ಒಕಾರಾ
                                                                                                        ಅನುವಾದ: ಉಮಾಶಂಕರ್ ಕೆ