Tuesday, August 13, 2024
ಅಷ್ಟಾವಧಾನದಲ್ಲಿ ಕೊಟ್ಟ ಆಶುಕವಿತೆಯ ವಸ್ತುಗಳು
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||
Monday, June 10, 2024
ಆ ಬೈಗು..
ಬೈಗಿನ ಹೊತ್ತು... ಲಕ್ಷೋಪಲಕ್ಷವೃಕ್ಷಪತ್ರಗಳು ಮುಳುಗುವ ಸೂರ್ಯನ ಕೆಂಗಾಂತಿಯನ್ನು ಪ್ರತಿಫಲಿಸಿ ಆತನಿಗೆ ವಿದಾಯ ಹೇಳುತ್ತಿದ್ದವು. ತಮ್ಮ ಕೋಟ್ಯಂತರ ಹಸ್ತಗಳಿಂದ ಸೂರ್ಯನಿಗೆ ಸಾಯಂಕಾಲದ ಆರತಿಯನ್ನು ಎತ್ತುತ್ತಿದ್ದಂತೆ ಅವುಗಳು ಕಾಣಿಸುತ್ತಿದ್ದವು. ಕಾಡಿನ ಗಂಭೀರ ಮಹನ್ಮೌನವನ್ನು ಹೆಚ್ಚುಗೊಳಿಸುತ್ತಿದ್ದ ನಿಶಾಚರ ಹಕ್ಕಿಗಳ ಸದ್ದು ಗರ್ಭಗುಡಿಯ ನೀಲಾಂಜನದ ಮಂದಬೆಳಕಿನಲ್ಲಿ ಮೆಲುವಾಗಿ ಮಂತ್ರಪಠಿಸುತ್ತಿದ್ದ ಅರ್ಚಕರ ಧ್ವನಿಯಂತಿತ್ತು. ಸ್ವರ್ಣಾ ನಿಶ್ಶಬ್ದವಾಗಿ ಮನಸ್ಸನ್ನೆಲ್ಲಾ ಅರಿತವಳಂತೆ ಸಾಂತ್ವನ ನೀಡುವವಳಂತೆ ಹರಿಯುತ್ತಿದ್ದಳು. ನದಿಯ ಮೇಲೆ ಬಾಗಿದ್ದ ದಟ್ಟ ಎಲೆಗಳಿದ್ದ ವೃಕ್ಷಗಳು ಏನೋ ನಿಗೂಢತೆಯನ್ನು ಆ ಇಳಿಸಂಜೆಯ ನೀರವತೆಯಲ್ಲಿ ತಮ್ಮೊಳಗೆ ಘನೀಭವಿಸಿಕೊಂಡಂತೆ ಕಂಡುಬರುತ್ತಿದ್ದವು. ಏನೋ ಕಾತರಪೂರ್ಣ ಸ್ತಬ್ಧ ವಾತಾವರಣ... ಹೋಗಿ ಗೂಡಿಗೆ ಸೇರಿಕೊಳ್ಳುವ ಸಮಯ ಎಂದು ಕೋಟ್ಯಂತರ ವರ್ಷಗಳ ಹಿಂದಿನ ಮಾನವನಿಗೆ ನೀಡುತ್ತಿದ್ದ ಸೂಚನೆಯಂತೆ ನನಗೂ ಈಗ ಪ್ರಕೃತಿ ನೀಡುತ್ತಿದ್ದಳು. ಅವಳಿಗೆ ಅದೆಂತಹ ಪ್ರಚಂಡ ಶಕ್ತಿ..! ತನ್ನ ಪ್ರಶಾಂತತೆಯಿಂದ ಮನುಷ್ಯನ ಎಲ್ಲ ಚಿತ್ತವೃತ್ತಿಗಳನ್ನೂ ಕೆಲಕಾಲ ಶಮನಗೊಳಿಸುವ ಶಾಂತ, ದೃಢ ಶಕ್ತಿ..! ಸಮಸ್ತ ವಿಶ್ವವನ್ನೂ ಶಾಂತಿಯ ಚಿಪ್ಪಿನೊಳಗೆ ತೂರಿಸಿಬಿಡುವ ಶಕ್ತಿ..! ಮನಸ್ಸಿನಲ್ಲಿ ಅದೇನೋ ಉನ್ನತಭಾವವನ್ನು ತುಂಬಿ ವಿಶ್ವವ್ಯಾಪೀ ಸರ್ವಶಕ್ತನಿಗೆ ವಿನಮ್ರವಾಗಿ ಪ್ರಾಂಜಲತೆಯಿಂದ ಮಣಿದು, ಕೃತಜ್ಞತೆಯಿಂದ ನಮಸ್ಕರಿಸಿಬಿಡಬೇಕೆನ್ನುವ ಭಾವವನ್ನುಕ್ಕಿಸುವ ಪವಿತ್ರ ಶಕ್ತಿ..! ಅಲ್ಲಿ ಮಾತಿಗೆ ಮನಸಿಲ್ಲ. ಮನಸ್ಸೂ ನಿಶ್ಶಬ್ದವಾಗಿ ಕುಳಿತುಬಿಟ್ಟಿತ್ತು. ಏನೋ ಅರಿಯದ ಸಂತೃಪ್ತಿ ಮನಸ್ಸನ್ನೆಲ್ಲಾ ಆವರಿಸಿತು. ಆ ಆಹ್ಲಾದಕರ ಭಾರವನ್ನು ಹೊತ್ತು ಮೆಲ್ಲ ಮೆಲ್ಲನೆ ನಮ್ಮ ಗೂಡಿನತ್ತ ನಡೆದೆವು.
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||
ಅಷ್ಟದಳಪದ್ಮಬಂಧ
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||
Saturday, May 4, 2024
ಯಕ್ಷಗಾನ
ಸಣ್ಣವರಿದ್ದಾಗ ಯಕ್ಷಗಾನ ನೋಡುವ ಹುಚ್ಚು ಹತ್ತಿಸಿಕೊಳ್ಳದವರು ಯಾರಿದ್ದಾರೆ ಹೇಳಿ? ನಾನಂತೂ ಯಕ್ಷಗಾನ ಎಲ್ಲೇ ನಡೆಯಲಿ; ಅಲ್ಲಿಗೆ ನನ್ನನ್ನು ಕರೆದೊಯ್ಯಲು ಅಪ್ಪನನ್ನು ಕಾಡಿಸಿ, ಪೀಡಿಸಿ ಅವರಿಗೆ ದುಂಬಾಲು ಬೀಳುತ್ತಿದ್ದೆ. ಹೋಗುವ ಹಪಹಪಿಯಲ್ಲಿರುತ್ತಿದ್ದ ನನಗೆ ಅವರು ಹೊರಡಲು ಸಿದ್ಧರಾಗುವುದು ಯಾವತ್ತೂ ವಿಳಂಬವಾದಂತೆಯೇ ಅನ್ನಿಸುತ್ತಿತ್ತು!. ನಡೆದುಕೊಂಡೋ, ಸ್ಕೂಟರಿನಲ್ಲೋ ಹೋಗುತ್ತಿದ್ದೆವು. ಯಕ್ಷಗಾನ ಪ್ರದರ್ಶನದ ಸ್ಥಳ ಸಮೀಪಿಸುತ್ತಿದ್ದಂತೆಯೇ ಕೇಳುವ ಚೆಂಡೆ-ಮದ್ದಳೆಗಳ ಘೋಷಕ್ಕೆ ಕಾಲುಗಳು ತಕತಕ ಕುಣಿಯುವಂತಾಗಿ, ಹೆಚ್ಚು ಕಡಿಮೆ ಓಡುತ್ತಲೇ ನಡೆಯುತ್ತಿದ್ದೆ. ಈ ಅಪ್ಪ ಬೇಗ ಬೇಗ ಬರಬಾರದೇ ಎಂದೆನಿಸಿಬಿಡುತ್ತಿತ್ತು. ಆ ಸಮಯದಲ್ಲಿ ಅಪ್ಪನ ಪರಿಚಯಸ್ಥರು ಯಾರಾದರೂ ಸಿಕ್ಕಿ ಮಾತನಾಡಲು ತೊಡಗಿದರೆ ಸಿಟ್ಟು ನೆತ್ತಿಗಡರುತ್ತಿತ್ತು. ಅಪ್ಪನ ಕೈ ಹಿಡಿದು "ಹೋಗುವಾ...ಹೋಗುವಾ.." ಎಂದು ಎಳೆಯತೊಡಗುತ್ತಿದ್ದೆ.
ಗಂಡುಮೆಟ್ಟಿನ ನೆಲದ ಕಲೆಯಿದು
ಚೆಂಡೆಮದ್ದಳೆ ಘೋಷ ಕಲೆವುದು
ದಂಡಧರನೂ ನೋಡಬೆದರುವ ವೇಷವಿಲ್ಲಿಹುದು|
ಹಂಡೆಗಾತ್ರದ ಮುಕುಟವಿಟ್ಟಿಹ
ಮಂಡೆಯನು ತೂಗುತ್ತ ಕುಣಿಯುತ
ದುಂಡುದುಂಡನೆ ಬಿಡದೆ ಸುತ್ತುವ ಶೂರರಿಲ್ಲಿಹರು||
ಯಕ್ಷಗಾನದ ಸೊಬಗ ಬಣ್ಣಿಸೆ
ಲಕ್ಷ ಪದಗಳು ಸಾಕು ಎನಿಪವೆ
ದೀಕ್ಷೆಯಿಂದಲಿ ಕುಳಿತು ವೀಕ್ಷಿಸೆ ನಿಶೆಯ ತಂಪಿನಲಿ|
ದಕ್ಷ ಕಂಠದ ಭಾಗವತರಿರೆ
ಯಕ್ಷಧೀಂಗಿಣರಸಿಕಸಭಿಕನು
ಅಕ್ಷಿಯನು ಮುಚ್ಚಿಸದ ಕಲೆಗಿದೊ ಜಯತು ಕೇಳೆಂದ||
-ಉಮಾಶಂಕರ್ ಕೆ
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||
Tuesday, April 23, 2024
ವಿಶ್ವ ಪುಸ್ತಕದಿನ
ಇವತ್ತು ವಿಶ್ವ ಪುಸ್ತಕ ದಿನವಂತೆ. ನನಗೆ ಪುಸ್ತಕಗಳನ್ನೋದುವ ಹುಚ್ಚು ಬೆಳೆದ
ನೆನಪಾಗುತ್ತಿದೆ.
ನಮ್ಮ ಮನೆಯಲ್ಲಿ ಟಿವಿ ಇಲ್ಲ. ಸಣ್ಣವರಿದ್ದಾಗ ಅಪ್ಪ ತರುತ್ತಿದ್ದ
ಬಾಲಮಂಗಳ, ಮನೆಯಲ್ಲಿದ್ದ ಹಳೆಯ ಚಂದಮಾಮಗಳನ್ನು ನನಗೆ ಮೊದಲು, ನನಗೆ ಮೊದಲು ಎಂದು ಜಗಳ ಮಾಡಿ ಓದುತ್ತಿದ್ದೆವು. ಬೆಳಿಗ್ಗೆದ್ದು
ಕಷಾಯ ಕುಡಿಯುವಾಗಿನಿಂದ ಹಿಡಿದು, ತಿಂಡಿ, ಊಟಗಳ
ಸಮಯದಲ್ಲೂ ಕೈಯಲ್ಲಿ ಪುಸ್ತಕಗಳಿರುತ್ತಿದ್ದವು. ಊಟ ಮಾಡುವಾಗಾದರೂ ಪುಸ್ತಕ ಬದಿಗಿಡಬಾರದೇ ಎಂದು ಅಪ್ಪ, ಅಮ್ಮ ಬೈಯ್ಯುತ್ತಿದ್ದರು. ದೊಡ್ಡಕ್ಕ ಅಪ್ಪನ ಆಫೀಸಿನ ಲೈಬ್ರರಿಯಿಂದ ತಂದ, ಯಂಡಮೂರಿ ವೀರೇಂದ್ರನಾಥರ, ಅಂತಿಮ ಹೋರಾಟ ಪುಸ್ತಕವನ್ನು ರೋಚಕವಾಗಿ
ನನಗೆ ಹಾಗೂ ಸಣ್ಣಕ್ಕನಿಗೆ ಓದುತ್ತಿದ್ದದ್ದು ಕಣ್ಣಿಗೆ ಕಟ್ಟಿದಂತಿದೆ. ಆಮೇಲೆ ಅವಳ ಬಾಣಂತನದಲ್ಲಿ
ನಾನು ಎಷ್ಟೋ ಪುಸ್ತಕಗಳನ್ನು ಅವಳಿಗೆ ಓದಿ ಹೇಳಿ ಆ ಋಣ ತೀರಿಸಿದೆನೆನ್ನಿ! ಆಮೇಲೆ ಅಪ್ಪನ ಗ್ರಂಥ ಭಂಡಾರದಲ್ಲಿದ್ದ
ಕುವೆಂಪು ಸಿಕ್ಕಿದರು. ಅವರ ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ಮಲೆನಾಡಿನ ಚಿತ್ರಗಳು ಮುಂತಾದವನ್ನೆಲ್ಲ ಪ್ರೌಢಶಾಲೆ ಮುಗಿಯುವ ಮುನ್ನ ಓದಿ ಮುಗಿಸಿದ್ದಾಗಿತ್ತು.
ಎಂಟನೆಯಲ್ಲೋ ಒಂಭತ್ತನೆಯಲ್ಲೋ ಕೇಂದ್ರ ಗ್ರಂಥಾಲಯದ ಲೈಬ್ರರಿ ಕಾರ್ಡ್ ಮಾಡಿಸಿಕೊಂಡೆವು; ನಾನು, ಸಣ್ಣಕ್ಕ. ಅಲ್ಲಿಂದ ಶುರು: ಯಂಡಮೂರಿ ವೀರೇಂದ್ರನಾಥ್, ತರಾಸು, ಅನಕೃ, ಪೂರ್ಣಚಂದ್ರ ತೇಜಸ್ವಿ, ರವೀಂದ್ರನಾಥ್ ಠಾಗೋರ್, ಪಿ ಎಸ್ ಶ್ರೀನಿವಾಸ್ ಮುಂತಾದವರನ್ನೆಲ್ಲಾ
ಗಬಗಬನೆ ಓದಿ ಮುಗಿಸಿದೆವು. ಡಿಗ್ರಿಗೆ ಬರುವಾಗ ಮತ್ತೆ ಕೆಲ ಮಹನೀಯರು ಪರಿಚಯವಾದರು: ಬಿ ಜಿ ಎಲ್ ಸ್ವಾಮಿ, ಗೊರೂರು ರಾಮಸ್ವಾಮಿ ಐಯಂಗಾರ್, ಮಾಸ್ತಿ, ಶಿವರಾಮ ಕಾರಂತ ಇತ್ಯಾದಿ. ಅಲ್ಲಿಯವರೆಗೆ ಹಳೆಗನ್ನಡ ಕಾವ್ಯಗಳನ್ನು ಓದಿರಲಿಲ್ಲ. ಮನೆಯಲ್ಲಿ
ಅಪ್ಪ ರಾತ್ರಿಯೂಟ ಮುಗಿಸಿ ಕುಮಾರವ್ಯಾಸ ಭಾರತ, ರಾಮಾಯಣ ದರ್ಶನಂ, ರಾಮಾಶ್ವಮೇಧಮ್ ಗಳ ಭಾಗಗಳನ್ನು ರಾಗವಾಗಿ ಓದುವುದನ್ನು, ಅಮ್ಮ
ಅವರ ಪಠ್ಯದಲ್ಲಿದ್ದ ಲಕ್ಷ್ಮೀಶನ ಜೈಮಿನಿ ಭಾರತದ ಭಾಗಗಳನ್ನೋ, ತೊರವೆ ರಾಮಾಯಣದ
ಭಾಗಗಳನ್ನೋ ಗುನುಗಿಕೊಳ್ಳುವಾಗ ನಮ್ಮ ಓದು, ಕೆಲಸಗಳ ಮಧ್ಯ ಅಪ್ರಯತ್ನವಾಗಿ
ಕೇಳಿಸಿಕೊಳ್ಳುತ್ತಿದ್ದುದೆಷ್ಟೋ ಅಷ್ಟೇ. ಅನೇಕ ಬಾರಿ ಅಪ್ಪ ನಮ್ಮನ್ನು ಕರೆದು
ಕೂರಿಸಿ ಓದುತ್ತಿದ್ದರು. ಆಗ ಕೆಲವೊಮ್ಮೆ ಶಿಕ್ಷೆಯೆನಿಸುತ್ತಿತ್ತು. ಆದರೆ ಈಗ ಅವನ್ನು ನೆನೆಸಿಕೊಂಡಾಗ
ಅಪ್ಪ-ಅಮ್ಮ ಎಂಥ ಮಹದುಪಕಾರ ಮಾಡುತ್ತಿದ್ದರು ಎನ್ನುವುದು ಅರಿವಾಗುತ್ತಿದೆ. ರಸವನ್ನು ಮನಃಪೂರ್ತಿಯಾಗಿ
ಅನುಭವಿಸುವುದನ್ನು ತಿಳಿಸಿಕೊಟ್ಟರು. ಅನೇಕ ಬಾರಿ ಮನಸ್ಸಿಗೆ ಬೇಸರವಾದಾಗ, ಮನಸ್ಸು ಒತ್ತಡದಲ್ಲಿದ್ದಾಗ ಯೋಚನೆಯನ್ನು ಬೇರೆಡೆಗೆ ಹರಿಸಿ ಮನಸ್ಸು ಹಗುರ ಮಾಡಿಕೊಳ್ಳಲು
ಪುಸ್ತಕಗಳು ಸಹಾಯಕ್ಕೆ ಒದಗುತ್ತಿದ್ದವು. ಎಂ ಎಸ್ಸಿ ಕೊನೆಯ ಸೆಮಿಸ್ಟರ್ ಪರೀಕ್ಷೆಯ ಹಿಂದಿನ ದಿನ ಬರೆಮನೆಯ
ಶಾಂತ ವಾತಾವರಣದಲ್ಲಿ ಕುಳಿತು ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯ ಓದು ಮುಗಿಸಿದ್ದು ಒಂದು
ಅತ್ಯಂತ ರಸಮಯ ನೆನಪು. ಶಿಕ್ಷಣಕ್ಕಾಗಿ ಮನೆಯಿಂದ ದೂರ ಹೋದರೂ ಓದು ನಿಲ್ಲಲಿಲ್ಲ. ಕೈಯ್ಯಲ್ಲಿದ್ದ ಹಣದ
ಬಹುಭಾಗ ಪುಸ್ತಕಗಳನ್ನು ಕೊಳ್ಳುವುದಕ್ಕೇ ಖರ್ಚಾಗಿ ಬಿಡುತ್ತಿತ್ತು. ಸಣ್ಣವನಿದ್ದಾಗ ಯೋಚನೆಗಳ ಮೇಲೆ
ತುಂಬಾ ಪರಿಣಾಮ ಬೀರಿದ್ದು ಯಂಡಮೂರಿಯಾದರೆ ಅನಂತರ ಗಾಢವಾಗಿ ಕಾಡಿದ್ದು ಭೈರಪ್ಪ. ಕೋರೋನ ಸಮಯದಲ್ಲಿ
ದುರ್ಗಸಿಂಹನ ಪಂಚತಂತ್ರ ಓದಿ ಮುಗಿಸಿದ್ದು ಹಳಗನ್ನಡದ ಅನೇಕ ಶಬ್ದಗಳ ಪರಿಚಯವಾಗಲು ಕಾರಣವಾಯಿತು. ಸದ್ಯಕ್ಕೆ
ಶತಾವಧಾನಿ ಆರ್ ಗಣೇಶ್, ಡಿವಿಜಿ ಮುಂತಾದ ಮಹನೀಯರ ಪುಸ್ತಕಗಳನ್ನೋದುವ ಪರ್ವ.
ಇನ್ನೂ
ಓದಬೇಕು ಅಂದುಕೊಂಡ ಪುಸ್ತಕಗಳ ಪಟ್ಟಿಯ ಉದ್ದ ನೋಡುವಾಗ ಗಾಬರಿಯಾಗುತ್ತದೆ. ಬಹುಶಃ ಈ ಒಂದು ಜನ್ಮ ಸಾಲದೇನೋ.
ಅದರಲ್ಲೂ ಕೈಯಲ್ಲಿ ಮೊಬೈಲ್ ಬಂದಮೇಲೆ ಈ ಸಂಶಯ ಸಕಾರಣವಾದದ್ದು ಅನಿಸುತ್ತಿದೆ.
-ಉಮಾಶಂಕರ ಕೇಳತ್ತಾಯ
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||


.jpg)