Tuesday, August 13, 2024

ಅಷ್ಟಾವಧಾನದಲ್ಲಿ ಕೊಟ್ಟ ಆಶುಕವಿತೆಯ ವಸ್ತುಗಳು

ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರ ಅಷ್ಟಾವಧಾನದಲ್ಲಿ ಆಶುಕವಿತಾವಿಭಾಗಕ್ಕೆ ಪೃಚ್ಛಕನಾಗಿ ಭಾಗವಹಿಸುವ ಸುಯೋಗ ದೊರಕಿತ್ತು. ಕೆಳಗಿರುವವು ಅಲ್ಲಿ ಕೇಳಿದ ವಿಷಯಗಳು ಹಾಗೂ ಬರೆದುಕೊಂಡು ಹೋದ ಪದ್ಯಗಳು (ಸಮಯಾಭಾವದಿಂದಾಗಿ ಮೂರು ವಿಷಯಗಳನ್ನು ಮಾತ್ರ ಕೇಳುವುದಾಯಿತು. ಕೊನೆಯ ಸುತ್ತಿನಲ್ಲಿ ಕೆಳಗಿನ ಚಿತ್ರವನ್ನೇ ವಿಷಯವಾಗಿ ಕೊಟ್ಟದ್ದು).

೧. ಗಂಗೆಯಲ್ಲಿ ತೇಲಿಬಿಟ್ಟ ಹಣತೆಗಳು

ತೇಲುತುಂ ಬಹ ಫುಲ್ಲಕೋಮಲ ಹೇಮಪುಷ್ಪದ ಮಾಲೆಯೇಂ?
ಫಾಲಚಂದ್ರನ ನಾಗಮಾಲೆಗಳುತ್ತಮಾಂಗದ ಕಾಂತಿಯೇಂ?|
ಕಾಲವಾಹಿನಿಯಲ್ಲಿ ತೇಲ್ವ ಮಹಾನುಭಾವರ ದೀಪ್ತಿಯೇಂ?
ನೀಲ ಸುಂದರ ರಾತ್ರಿಯೊಳ್ ಸುರಗಂಗೆ ಕಾಶಿಯೊಳೊಪ್ಪುಗುಂ||
(ಮಲ್ಲಿಕಾಮಾಲೆ)

ತೇಲುತ್ತಾ ಬರುತ್ತಿರುವ ಅರಳಿದ ಸುಕೋಮಲ ಸೇವಂತಿಗೆಯ ಮಾಲೆಯೋ? ಶಿವನ ಆಭರಣಗಳಾದ ನಾಗಗಳ ಹೆಡೆಯ ಮೇಲಣ ಮಣಿಯ ಕಾಂತಿಯೋ? ಕಾಲವೆಂಬ ನದಿಯಲ್ಲಿ ತೇಲುವ ಮಹಾನುಭಾವರ ತೇಜಸ್ಸೋ? ಈ ರೀತಿ ಸುಂದರ ರಾತ್ರಿಯಲ್ಲಿ ಕಾಶಿಯ ದೇವಗಂಗೆ ಶೋಭಿಸುತ್ತಿದ್ದಾಳೆ.

೨. ಹೊಲಿಗೆಯ ಸೂಜಿ

ತನ್ನೊಳ್ ರಂಧ್ರಮನಿಟ್ಟ ಕೋಪಕಿನಿತುಂ ಸಾಧಿಪ್ಪೆಯೇಂ ಸೂಜಿಯೇ?
ಭಿನ್ನಂಗೊಂಡಿಹ ಶಲ್ಯಮಂ ಬಿಡದೆ ನೀಂ ಚುಚ್ಚುತ್ತೆ ನೋಯಿಪ್ಪೆಯೇಂ?|
ಚೆನ್ನೊಳ್ ಸಂದಿಹ ದಾರದಾ ಗುಣಗಳಿಂ ನೀನಿನ್ನು ಬಾಳಿರ್ಪೆಯೈ
ಬೆನ್ನೊಳ್ ನಿಂತಪರೂಪಮಾದ ಪರಿಯೊಳ್ ಒಂದಾಗಿಪಳ್ ಬಟ್ಟೆಯಂ||
(ಶಾರ್ದೂಲವಿಕ್ರೀಡಿತ)

ಸೂಜಿಯೇ, ನಿನ್ನಲ್ಲಿ ರಂಧ್ರವನ್ನಿಟ್ಟ ಕೋಪಕ್ಕೆ ಈ ರೀತಿಯಾಗಿ ಸೇಡು ತೀರಿಸಿಕೊಳ್ಳುತ್ತಿದ್ದೀಯೇನು? ಹರಿದ ಶಲ್ಯವನ್ನೂ ಬಿಡದೆ ಚುಚ್ಚಿ ಚುಚ್ಚಿ ನೋಯಿಸುತ್ತಿರುವೆ. ಚೆನ್ನಾಗಿ ಹೊಂದಿಕೊಂಡು ಹೋಗುವ ದಾರವಿದ್ದುದರಿಂದ ನೀನಿನ್ನೂ ಬದುಕಿದ್ದೀಯೆ. ಆಕೆ ನಿನ್ನ ಹಿಂದೆ ನಿಂತು ಬಟ್ಟೆಗಳನ್ನು ಒಂದಾಗಿಸುತ್ತಿದ್ದಾಳೆ. 
(‘ದಾರ’ ಶಬ್ದಕ್ಕೆ ನೂಲು ಎಂದು ಮಾತ್ರವಲ್ಲದೆ ಮಡದಿ ಎಂಬ ಅರ್ಥವೂ ಇದೆ. ಹಾಗೆಯೇ ‘ಬಟ್ಟೆ’ ಎಂದರೆ ವಸ್ತ್ರ ಹಾಗೂ ದಾರಿ ಎಂಬೆರಡು ಅರ್ಥಗಳಿವೆ.) 

೩. ಚಿತ್ರಕ್ಕೆ ಪದ್ಯ

ಕಪ್ಪುಮೋಡಗಳ ಹತ್ತಿಯುಂಡೆಯನು ಬಾಂದಳದಿ ಹರಡಿ ಚೆಲ್ಲಿ|
ವಾಯುದೇವನದೊ ಮಳೆಯಹನಿಗಳನು ನೂಲುತಿಹನೊ ಇಲ್ಲಿ||
ಹೊನ್ನ ಸೆರಗಿನಲಿ ಬುರುಗಿನಂಚುಗಳ ಚಂದದಿಂದ ಹೊಸೆದು|
ಅಲೆಯ ಮಗ್ಗದಲಿ ನೇಯ್ದ ನೀಲಿಯೇ ಶರಧಿಯಾಯಿತೆಸೆದು||
(ಸಂತುಲಿತ ಮಧ್ಯಾವರ್ತಗತಿ)

ಕಪ್ಪುಮೋಡಗಳೆನ್ನುವ ಹತ್ತಿಯ ಉಂಡೆಗಳನ್ನು ಬಾನಿನಲ್ಲಿ ಹರಡಿ ವಾಯುದೇವನು ಮಳೆಯಹನಿಗಳೆಂಬ ನೂಲನ್ನು ನೂಲುತ್ತಿದ್ದಾನೋ? ಚಿನ್ನದ ಸೆರಗಿಗೆ ನೊರೆಗಳೆನ್ನುವ ಅಂಚನ್ನು ಹೊಲಿದು ಅಲೆಗಳೆನ್ನುವ ಮಗ್ಗದಲ್ಲಿ ನೀಲಿಯನ್ನೇ ನೇಯಲು ಸಮುದ್ರವೆಂಬ ಸೀರೆಯು ಉಂಟಾಗಿ ಶೋಭಿಸುತ್ತಿರುವಂತೆ ಕಾಣಿಸುತ್ತಿದೆ.

ಅವಧಾನದಲ್ಲಿ ಎರಡನೇ ಬಾರಿಗೆ ಭಾಗವಹಿಸುವ ಭಾಗ್ಯವನ್ನು ಒದಗಿಸಿಕೊಟ್ಟ, ಸದಾ ಸಹೋದರ ಪ್ರೇಮದಿಂದ ಕಂಡು ಪ್ರೋತ್ಸಾಹಿಸುವ, ವಿದ್ವಾನ್ ಮಹೇಶ ಭಟ್ ಹಾರ್ಯಾಡಿಯವರಿಗೆ ಹೇಗೆ ಕೃತಜ್ಞತೆ ಹೇಳಬೇಕೋ ತಿಳಿಯುತ್ತಿಲ್ಲ. 
ಧನ್ಯೋಸ್ಮಿ!🙏🙏🙏

- ಉಮಾಶಂಕರ್ ಕೆ

Monday, June 10, 2024

ಆ ಬೈಗು..

                                                                                        (ಚಿತ್ರ: ಉಮಾಶಂಕರ ಕೇಳತ್ತಾಯ)

ಬೈಗಿನ ಹೊತ್ತು... ಲಕ್ಷೋಪಲಕ್ಷವೃಕ್ಷಪತ್ರಗಳು ಮುಳುಗುವ ಸೂರ್ಯನ ಕೆಂಗಾಂತಿಯನ್ನು ಪ್ರತಿಫಲಿಸಿ ಆತನಿಗೆ ವಿದಾಯ ಹೇಳುತ್ತಿದ್ದವು. ತಮ್ಮ ಕೋಟ್ಯಂತರ ಹಸ್ತಗಳಿಂದ ಸೂರ್ಯನಿಗೆ ಸಾಯಂಕಾಲದ ಆರತಿಯನ್ನು ಎತ್ತುತ್ತಿದ್ದಂತೆ ಅವುಗಳು ಕಾಣಿಸುತ್ತಿದ್ದವು. ಕಾಡಿನ ಗಂಭೀರ ಮಹನ್ಮೌನವನ್ನು ಹೆಚ್ಚುಗೊಳಿಸುತ್ತಿದ್ದ ನಿಶಾಚರ ಹಕ್ಕಿಗಳ ಸದ್ದು ಗರ್ಭಗುಡಿಯ ನೀಲಾಂಜನದ ಮಂದಬೆಳಕಿನಲ್ಲಿ ಮೆಲುವಾಗಿ ಮಂತ್ರಪಠಿಸುತ್ತಿದ್ದ ಅರ್ಚಕರ ಧ್ವನಿಯಂತಿತ್ತು. ಸ್ವರ್ಣಾ ನಿಶ್ಶಬ್ದವಾಗಿ ಮನಸ್ಸನ್ನೆಲ್ಲಾ ಅರಿತವಳಂತೆ ಸಾಂತ್ವನ ನೀಡುವವಳಂತೆ ಹರಿಯುತ್ತಿದ್ದಳು. ನದಿಯ ಮೇಲೆ ಬಾಗಿದ್ದ ದಟ್ಟ ಎಲೆಗಳಿದ್ದ ವೃಕ್ಷಗಳು ಏನೋ ನಿಗೂಢತೆಯನ್ನು ಆ ಇಳಿಸಂಜೆಯ ನೀರವತೆಯಲ್ಲಿ ತಮ್ಮೊಳಗೆ ಘನೀಭವಿಸಿಕೊಂಡಂತೆ ಕಂಡುಬರುತ್ತಿದ್ದವು. ಏನೋ ಕಾತರಪೂರ್ಣ ಸ್ತಬ್ಧ ವಾತಾವರಣ... ಹೋಗಿ ಗೂಡಿಗೆ ಸೇರಿಕೊಳ್ಳುವ ಸಮಯ ಎಂದು ಕೋಟ್ಯಂತರ ವರ್ಷಗಳ ಹಿಂದಿನ ಮಾನವನಿಗೆ ನೀಡುತ್ತಿದ್ದ ಸೂಚನೆಯಂತೆ ನನಗೂ ಈಗ ಪ್ರಕೃತಿ ನೀಡುತ್ತಿದ್ದಳು. ಅವಳಿಗೆ ಅದೆಂತಹ ಪ್ರಚಂಡ ಶಕ್ತಿ..! ತನ್ನ ಪ್ರಶಾಂತತೆಯಿಂದ ಮನುಷ್ಯನ ಎಲ್ಲ ಚಿತ್ತವೃತ್ತಿಗಳನ್ನೂ ಕೆಲಕಾಲ ಶಮನಗೊಳಿಸುವ ಶಾಂತ, ದೃಢ ಶಕ್ತಿ..! ಸಮಸ್ತ ವಿಶ್ವವನ್ನೂ ಶಾಂತಿಯ ಚಿಪ್ಪಿನೊಳಗೆ ತೂರಿಸಿಬಿಡುವ ಶಕ್ತಿ..! ಮನಸ್ಸಿನಲ್ಲಿ ಅದೇನೋ ಉನ್ನತಭಾವವನ್ನು ತುಂಬಿ ವಿಶ್ವವ್ಯಾಪೀ ಸರ್ವಶಕ್ತನಿಗೆ ವಿನಮ್ರವಾಗಿ ಪ್ರಾಂಜಲತೆಯಿಂದ ಮಣಿದು, ಕೃತಜ್ಞತೆಯಿಂದ ನಮಸ್ಕರಿಸಿಬಿಡಬೇಕೆನ್ನುವ ಭಾವವನ್ನುಕ್ಕಿಸುವ ಪವಿತ್ರ ಶಕ್ತಿ..! ಅಲ್ಲಿ ಮಾತಿಗೆ ಮನಸಿಲ್ಲ. ಮನಸ್ಸೂ ನಿಶ್ಶಬ್ದವಾಗಿ ಕುಳಿತುಬಿಟ್ಟಿತ್ತು. ಏನೋ ಅರಿಯದ ಸಂತೃಪ್ತಿ ಮನಸ್ಸನ್ನೆಲ್ಲಾ ಆವರಿಸಿತು. ಆ ಆಹ್ಲಾದಕರ ಭಾರವನ್ನು ಹೊತ್ತು ಮೆಲ್ಲ ಮೆಲ್ಲನೆ ನಮ್ಮ ಗೂಡಿನತ್ತ ನಡೆದೆವು.

ಅಷ್ಟದಳಪದ್ಮಬಂಧ

ನೀಲಕಂಠಾ ಮಹಾಜ್ಞಾನೀ
ನೀಲನೀರದ ವರ್ಣನೀ|
ನೀಲೆಯಂಥಾ ಕಾಗೆಸಾನೀ
ನೀರೆಯೆದುರ್ ಸೌದಾಮಿನೀ||

'ನೀಲಕಂಠನು ಮಹಾಜ್ಞಾನಿ. ಮಳೆಗಾಲದ ಕಾರ್ಮೋಡದ ಮೈಬಣ್ಣವಿರುವ ಈತನು, ಈ ನೀಲೆಯಂತಹ ಕಾಗೆರಾಣಿಯ ಮೈಬಣ್ಣವನ್ನು ಹೊಂದಿರುವವಳೆದುರು ಮಿಂಚಿನಂತೆ ಬೆಳ್ಳಗೆ ಹೊಳೆಯುತ್ತಿದ್ದಾನೆ'.

ಚಿತ್ರಕವಿತೆಯ ಒಂದು ಪ್ರಕಾರವಾದ ಅಷ್ಟದಳಪದ್ಮಬಂಧದಲ್ಲಿ ಕವಿತೆ ಬರೆಯುವ ಪ್ರಯತ್ನ ಇದು.

Saturday, May 4, 2024

ಯಕ್ಷಗಾನ

 


ಸಣ್ಣವರಿದ್ದಾಗ ಯಕ್ಷಗಾನ ನೋಡುವ ಹುಚ್ಚು ಹತ್ತಿಸಿಕೊಳ್ಳದವರು ಯಾರಿದ್ದಾರೆ ಹೇಳಿ? ನಾನಂತೂ ಯಕ್ಷಗಾನ ಎಲ್ಲೇ ನಡೆಯಲಿ; ಅಲ್ಲಿಗೆ ನನ್ನನ್ನು ಕರೆದೊಯ್ಯಲು ಅಪ್ಪನನ್ನು ಕಾಡಿಸಿ, ಪೀಡಿಸಿ ಅವರಿಗೆ ದುಂಬಾಲು ಬೀಳುತ್ತಿದ್ದೆ. ಹೋಗುವ ಹಪಹಪಿಯಲ್ಲಿರುತ್ತಿದ್ದ ನನಗೆ ಅವರು ಹೊರಡಲು ಸಿದ್ಧರಾಗುವುದು ಯಾವತ್ತೂ ವಿಳಂಬವಾದಂತೆಯೇ ಅನ್ನಿಸುತ್ತಿತ್ತು!. ನಡೆದುಕೊಂಡೋ, ಸ್ಕೂಟರಿನಲ್ಲೋ ಹೋಗುತ್ತಿದ್ದೆವು. ಯಕ್ಷಗಾನ ಪ್ರದರ್ಶನದ ಸ್ಥಳ ಸಮೀಪಿಸುತ್ತಿದ್ದಂತೆಯೇ ಕೇಳುವ ಚೆಂಡೆ-ಮದ್ದಳೆಗಳ ಘೋಷಕ್ಕೆ ಕಾಲುಗಳು ತಕತಕ ಕುಣಿಯುವಂತಾಗಿ, ಹೆಚ್ಚು ಕಡಿಮೆ ಓಡುತ್ತಲೇ ನಡೆಯುತ್ತಿದ್ದೆ. ಈ ಅಪ್ಪ ಬೇಗ ಬೇಗ ಬರಬಾರದೇ ಎಂದೆನಿಸಿಬಿಡುತ್ತಿತ್ತು. ಆ ಸಮಯದಲ್ಲಿ ಅಪ್ಪನ ಪರಿಚಯಸ್ಥರು ಯಾರಾದರೂ ಸಿಕ್ಕಿ ಮಾತನಾಡಲು ತೊಡಗಿದರೆ ಸಿಟ್ಟು ನೆತ್ತಿಗಡರುತ್ತಿತ್ತು. ಅಪ್ಪನ ಕೈ ಹಿಡಿದು "ಹೋಗುವಾ...ಹೋಗುವಾ.." ಎಂದು ಎಳೆಯತೊಡಗುತ್ತಿದ್ದೆ.


ಊರಜಾತ್ರೆ, ಚೌತಿ, ನವರಾತ್ರಿಗಳ ಕರೆಯೋಲೆಗಳು ಬಂದಾಗ ಮೊದಲು ಅದು ನನ್ನ ಕೈಗೆ ಸಿಗಬೇಕು. ಅದರಲ್ಲಿ ಮೂರನೆಯದೋ, ನಾಲ್ಕನೆಯದೋ ಪುಟದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಎಂದು ದೊಡ್ಡಕ್ಷರಗಳಲ್ಲಿ ಬರೆದ ಪ್ರಸಂಗ, ಕೆಳಗೆ ಸಣ್ಣಕ್ಷರಗಳಲ್ಲಿ ನೀಡಿದ ಕಲಾವಿದರ ಹೆಸರು, ವಿವರಗಳ ಮೇಲೆ ಕಣ್ಣಾಡಿಸುವವರೆಗೆ ನನ್ನ ಮನಸ್ಸಿಗೆ ಸಮಾಧಾನವಿರುತ್ತಿರಲಿಲ್ಲ. ಅಷ್ಟರಲ್ಲಿಯೇ ಆ ಕಾಲದ ಪ್ರಸಿದ್ಧ ಹಿಮ್ಮೇಳ, ಮುಮ್ಮೇಳಗಳ ಕಲಾವಿದರ ಹೆಸರುಗಳು ನನಗೆ ಚಿರಪರಿಚಿತವಾಗಿದ್ದವು.

ನಮ್ಮೂರಿನ ದೊಡ್ಡವರೊಬ್ಬರ ಪ್ರಾಯೋಜಕತ್ವದಲ್ಲಿ ನಡೆದ ಯಕ್ಷಗಾನಮಾಲಿಕೆಯ ಪ್ರತಿಯೊಂದು ಸರಣಿಗೂ ತಪ್ಪದೇ ಹಾಜರಿದ್ದು ವೀಕ್ಷಿಸಿದ್ದೆ. ಕೊನೆಗೆ ಅದು ಮುಗಿದ ಮೇಲೆ ಅದರ ಬಗೆಗೆ ನಾನೊಂದು ಅಭಿಪ್ರಾಯ ಬರೆದುಕೊಡಬೇಕೆಂದು ಕೇಳಿಕೊಂಡರು. ಆಗ ನಾನು ಐದನೆಯ ಕ್ಲಾಸಿನಲ್ಲಿದ್ದೆ. ದೊಡ್ಡಕ್ಕ ಹೇಳಿಕೊಟ್ಟಂತೆ 'ನನ್ನ' ಅಭಿಪ್ರಾಯ ಬರೆದು ಕಳುಹಿಸಿದ್ದೆ. ಆ ಯಕ್ಷಗಾನಮಾಲಿಕೆಯ ವಿವರಗಳನ್ನೊಳಗೊಂಡ ಪುಸ್ತಕದ ಕೊನೆಯ ಪುಟದಲ್ಲಿ ಅದು ಮುದ್ರಿತವಾಗಿತ್ತು.

ನನ್ನ ಜೀವನಚರಿತ್ರೆಯಲ್ಲಿ ಇನ್ನೂ ಹಿಂದಕ್ಕೆ ಹೋದರೆ ನನಗೆ ಒಂದನೆಯ ತರಗತಿಯಲ್ಲೇ ಯಕ್ಷಗಾನ ಬಯಲಾಟ ನೋಡುವ ಹುಚ್ಚಿತ್ತು ಎಂಬುದಕ್ಕೆ ಕೆಲವು ಸಾಕ್ಷಿಗಳು ದೊರೆಯುತ್ತವೆ:- ನಾನೊಮ್ಮೆ ರಜೆಯಲ್ಲಿ ಅಜ್ಜಿಯಮನೆಗೆ ಹೋಗಿದ್ದೆನಂತೆ. ಆ ರಾತ್ರಿ ನಮ್ಮ ಹತ್ತಿರದ ಸಂಬಂಧಿಕರೊಬ್ಬರ ಹರಕೆಯಾಟ ನಡೆಯಲಿದೆ ಎಂದು ತಿಳಿಯಿತು. ಅಜ್ಜಿ ಮತ್ತು ನನ್ನ ಅಕ್ಕ ಹೋಗುವವರಿದ್ದರು. ಸರಿ.. ಎಂದಿನಂತೆ, ನಾನೂ ಹೋಗುತ್ತೇನೆಂದು ಹಟಹಿಡಿದೆನಂತೆ. ಅಮ್ಮ "ನಿನಗೆ ನಿದ್ರೆ ಬರಬಹುದು" ಎಂದು ತಡೆದರೂ ಕೇಳಲಿಲ್ಲವಂತೆ. ಅಜ್ಜಿಯೂ ಅಮ್ಮನ ಮನವೊಲಿಸಿದರಂತೆ. ಕೊನೆಗೂ ನಾವು ಮೂವರು- ಅಜ್ಜಿ, ಅಕ್ಕ, ನಾನು- ಹೊರಟೆವು. ಮರುದಿನ ಮುಂಜಾವದವರೆಗೂ ವೀಕ್ಷಿಸಿ ಹಿಂದಿರುಗಿದೆವು. ಅಜ್ಜಿ, ಅಮ್ಮನ ಬಳಿ "ಅವನನ್ನು ಕರೆದುಕೊಂಡು ಹೋಗದಿರುತ್ತಿದ್ದರೆ ನಮಗೆ ಪಾಪ ಬರುತ್ತಿತ್ತು. ಇಡೀ ರಾತ್ರಿ ಒಂದು ಕ್ಷಣವೂ ಕಣ್ಣು ಮುಚ್ಚಲಿಲ್ಲ" ಅಂದರಂತೆ! ಆ ಬಯಲಾಟದ ವೇಷಗಳೆಲ್ಲಾ ನೆನಪಿನಲ್ಲಿಲ್ಲದಿದ್ದರೂ, ನಡುರಾತ್ರಿ ಸಂಬಂಧಿಕರ ಹುಡುಗನೊಬ್ಬ ಚಹಾ, ಕಡಿ, ಅಂಬೊಡೆಗಳನ್ನು ವಿತರಿಸಲು ಬಂದಾಗ ಅಜ್ಜಿಯ ತೊಡೆಯಲ್ಲಿ ನನಗೆ ಎಚ್ಚರವಾದದ್ದು ಚೆನ್ನಾಗಿ ನೆನಪಿದೆ! ಅನಂತರ ಒಂದು ಕ್ಷಣವೂ ಕಣ್ಣು ಮುಚ್ಚಲಿಲ್ಲ ಬಿಡಿ.

ಅನೇಕ ಯಕ್ಷಗಾನ ಪ್ರಸಂಗಗಳಲ್ಲಿ ಬರುವ ರಕ್ಕಸರ ವೇಷ , ಕುಣಿತ, ಅಬ್ಬರಗಳಿಗೆ ನಾನು ಬೆರಗಾಗಿ‌ಹೋದದ್ದುಂಟು. ದೇವಿಮಹಾತ್ಮೆ ಪ್ರಸಂಗದಲ್ಲಿ, ಕುಳಿತಿದ್ದ ಸಭಿಕರು ಬೆದರಿ ದೂರಸರಿದು ನಿಲ್ಲುವಂತೆ, ಚೆಂಡೆ-ಮದ್ದಳೆಗಳ ಕಿವಿಗಡಚಿಕ್ಕುವ ತಾರಕ ರವರವನಾದದ ನಡುವೆ, ರಾಳದ ಹುಡಿ ಎಬ್ಬಿಸಿದ ಬೆಂಕಿಯ ಉಂಡೆಗಳ ಬೆಳಕಿನಲ್ಲಿ ಹೊಳೆಯುತ್ತಾ ಅಬ್ಬರಿಸಿ ಬರುವ ಭೀಕರಾಕೃತಿಯ ಮಹಿಷಾಸುರನನ್ನು, ಬಿಟ್ಟಬಾಯಿ ಮುಚ್ಚದೆ, ಗರಬಡಿದವನಂತೆ ನಿಂತು ನೋಡಿದ್ದುಂಟು. ಇವನ್ನೆಲ್ಲಾ ನೆನಪಿಸಿಕೊಂಡಾಗ ನನಗನ್ನಿಸಿದ್ದು ಹೀಗೆ:-

ಗಂಡುಮೆಟ್ಟಿನ ನೆಲದ ಕಲೆಯಿದು
ಚೆಂಡೆಮದ್ದಳೆ ಘೋಷ ಕಲೆವುದು
ದಂಡಧರನೂ ನೋಡಬೆದರುವ ವೇಷವಿಲ್ಲಿಹುದು|
ಹಂಡೆಗಾತ್ರದ ಮುಕುಟವಿಟ್ಟಿಹ
ಮಂಡೆಯನು ತೂಗುತ್ತ ಕುಣಿಯುತ
ದುಂಡುದುಂಡನೆ ಬಿಡದೆ ಸುತ್ತುವ ಶೂರರಿಲ್ಲಿಹರು||

ಈಗಲೂ ಮನೆಯಲ್ಲಿರುವ ಕೆಲವು ಅಪೂರ್ವ ಧ್ವನಿಸುರುಳಿಗಳನ್ನು ಆಗಾಗ್ಗೆ ಟೇಪ್ ರೆಕಾರ್ಡರಿನಲ್ಲಿ ಹಾಕಿ ಕೇಳುತ್ತಿರುತ್ತೇನೆ. ಶೇಣಿ, ಮಲ್ಪೆ ಸಾಮಗರು ಮುಂತಾದವರ ಅರ್ಥಗಾರಿಕೆ, ಬಲಿಪ, ಪೊಲ್ಯ ಶೆಟ್ರು, ಕಾಳಿಂಗ ನಾವಡ, ಪದ್ಯಾಣ, ಪುತ್ತಿಗೆ, ಧಾರೇಶ್ವರ ಮುಂತಾದವರ ಭಾಗವತಿಕೆಗಳನ್ನು ಕೇಳಿದಷ್ಟೂ ಸಾಕೆನಿಸುವುದಿಲ್ಲ. ಕೇಳಿದರೆ ಕೇಳುತ್ತಲೇ ಇರಬೇಕೆನ್ನಿಸುವ, ನೋಡುತ್ತಿದ್ದರೆ ಕಣ್ಣು ಮುಚ್ಚಲು ಮನಸು ಬಾರದಂತೆ ಮಗ್ನಗೊಳಿಸುವ ಈ ಕಲೆಗೆ ಭಾಮಿನಿ ಷಟ್ಪದಿಯಲ್ಲೊಂದು ನಮನ:-

ಯಕ್ಷಗಾನದ ಸೊಬಗ ಬಣ್ಣಿಸೆ
ಲಕ್ಷ ಪದಗಳು ಸಾಕು ಎನಿಪವೆ
ದೀಕ್ಷೆಯಿಂದಲಿ ಕುಳಿತು ವೀಕ್ಷಿಸೆ ನಿಶೆಯ ತಂಪಿನಲಿ|
ದಕ್ಷ ಕಂಠದ ಭಾಗವತರಿರೆ
ಯಕ್ಷಧೀಂಗಿಣರಸಿಕಸಭಿಕನು
ಅಕ್ಷಿಯನು ಮುಚ್ಚಿಸದ ಕಲೆಗಿದೊ ಜಯತು ಕೇಳೆಂದ||

-ಉಮಾಶಂಕರ್ ಕೆ

Tuesday, April 23, 2024

ವಿಶ್ವ ಪುಸ್ತಕದಿನ

 


ಇವತ್ತು ವಿಶ್ವ ಪುಸ್ತಕ ದಿನವಂತೆ. ನನಗೆ ಪುಸ್ತಕಗಳನ್ನೋದುವ ಹುಚ್ಚು ಬೆಳೆದ ನೆನಪಾಗುತ್ತಿದೆ.

ನಮ್ಮ ಮನೆಯಲ್ಲಿ ಟಿ‌ವಿ ಇಲ್ಲ. ಸಣ್ಣವರಿದ್ದಾಗ ಅಪ್ಪ ತರುತ್ತಿದ್ದ ಬಾಲಮಂಗಳ, ಮನೆಯಲ್ಲಿದ್ದ ಹಳೆಯ ಚಂದಮಾಮಗಳನ್ನು ನನಗೆ ಮೊದಲು, ನನಗೆ ಮೊದಲು ಎಂದು ಜಗಳ ಮಾಡಿ ಓದುತ್ತಿದ್ದೆವು. ಬೆಳಿಗ್ಗೆದ್ದು ಕಷಾಯ ಕುಡಿಯುವಾಗಿನಿಂದ ಹಿಡಿದು, ತಿಂಡಿ, ಊಟಗಳ ಸಮಯದಲ್ಲೂ ಕೈಯಲ್ಲಿ ಪುಸ್ತಕಗಳಿರುತ್ತಿದ್ದವು. ಊಟ ಮಾಡುವಾಗಾದರೂ ಪುಸ್ತಕ ಬದಿಗಿಡಬಾರದೇ ಎಂದು ಅಪ್ಪ, ಅಮ್ಮ ಬೈಯ್ಯುತ್ತಿದ್ದರು. ದೊಡ್ಡಕ್ಕ ಅಪ್ಪನ ಆಫೀಸಿನ ಲೈಬ್ರರಿಯಿಂದ ತಂದ, ಯಂಡಮೂರಿ ವೀರೇಂದ್ರನಾಥರ, ಅಂತಿಮ ಹೋರಾಟ ಪುಸ್ತಕವನ್ನು ರೋಚಕವಾಗಿ ನನಗೆ ಹಾಗೂ ಸಣ್ಣಕ್ಕನಿಗೆ ಓದುತ್ತಿದ್ದದ್ದು ಕಣ್ಣಿಗೆ ಕಟ್ಟಿದಂತಿದೆ. ಆಮೇಲೆ ಅವಳ ಬಾಣಂತನದಲ್ಲಿ ನಾನು ಎಷ್ಟೋ ಪುಸ್ತಕಗಳನ್ನು ಅವಳಿಗೆ ಓದಿ ಹೇಳಿ ಆ ಋಣ ತೀರಿಸಿದೆನೆನ್ನಿ! ಆಮೇಲೆ ಅಪ್ಪನ ಗ್ರಂಥ ಭಂಡಾರದಲ್ಲಿದ್ದ ಕುವೆಂಪು ಸಿಕ್ಕಿದರು. ಅವರ ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ಮಲೆನಾಡಿನ ಚಿತ್ರಗಳು ಮುಂತಾದವನ್ನೆಲ್ಲ ಪ್ರೌಢಶಾಲೆ ಮುಗಿಯುವ ಮುನ್ನ ಓದಿ ಮುಗಿಸಿದ್ದಾಗಿತ್ತು. ಎಂಟನೆಯಲ್ಲೋ ಒಂಭತ್ತನೆಯಲ್ಲೋ ಕೇಂದ್ರ ಗ್ರಂಥಾಲಯದ ಲೈಬ್ರರಿ ಕಾರ್ಡ್ ಮಾಡಿಸಿಕೊಂಡೆವು; ನಾನು, ಸಣ್ಣಕ್ಕ. ಅಲ್ಲಿಂದ ಶುರು: ಯಂಡಮೂರಿ ವೀರೇಂದ್ರನಾಥ್, ತರಾಸು, ಅನಕೃ, ಪೂರ್ಣಚಂದ್ರ ತೇಜಸ್ವಿ, ರವೀಂದ್ರನಾಥ್ ಠಾಗೋರ್, ಪಿ ಎಸ್ ಶ್ರೀನಿವಾಸ್ ಮುಂತಾದವರನ್ನೆಲ್ಲಾ ಗಬಗಬನೆ ಓದಿ ಮುಗಿಸಿದೆವು. ಡಿಗ್ರಿಗೆ ಬರುವಾಗ ಮತ್ತೆ ಕೆಲ ಮಹನೀಯರು ಪರಿಚಯವಾದರು: ಬಿ ಜಿ ಎಲ್ ಸ್ವಾಮಿ, ಗೊರೂರು ರಾಮಸ್ವಾಮಿ ಐಯಂಗಾರ್, ಮಾಸ್ತಿ, ಶಿವರಾಮ ಕಾರಂತ ಇತ್ಯಾದಿ. ಅಲ್ಲಿಯವರೆಗೆ ಹಳೆಗನ್ನಡ ಕಾವ್ಯಗಳನ್ನು ಓದಿರಲಿಲ್ಲ. ಮನೆಯಲ್ಲಿ ಅಪ್ಪ ರಾತ್ರಿಯೂಟ ಮುಗಿಸಿ ಕುಮಾರವ್ಯಾಸ ಭಾರತ, ರಾಮಾಯಣ ದರ್ಶನಂ, ರಾಮಾಶ್ವಮೇಧಮ್ ಗಳ ಭಾಗಗಳನ್ನು ರಾಗವಾಗಿ ಓದುವುದನ್ನು, ಅಮ್ಮ ಅವರ ಪಠ್ಯದಲ್ಲಿದ್ದ ಲಕ್ಷ್ಮೀಶನ ಜೈಮಿನಿ ಭಾರತದ ಭಾಗಗಳನ್ನೋ, ತೊರವೆ ರಾಮಾಯಣದ ಭಾಗಗಳನ್ನೋ ಗುನುಗಿಕೊಳ್ಳುವಾಗ ನಮ್ಮ ಓದು, ಕೆಲಸಗಳ ಮಧ್ಯ ಅಪ್ರಯತ್ನವಾಗಿ ಕೇಳಿಸಿಕೊಳ್ಳುತ್ತಿದ್ದುದೆಷ್ಟೋ ಅಷ್ಟೇ. ಅನೇಕ ಬಾರಿ ಅಪ್ಪ ನಮ್ಮನ್ನು ಕರೆದು ಕೂರಿಸಿ ಓದುತ್ತಿದ್ದರು. ಆಗ ಕೆಲವೊಮ್ಮೆ ಶಿಕ್ಷೆಯೆನಿಸುತ್ತಿತ್ತು. ಆದರೆ ಈಗ ಅವನ್ನು ನೆನೆಸಿಕೊಂಡಾಗ ಅಪ್ಪ-ಅಮ್ಮ ಎಂಥ ಮಹದುಪಕಾರ ಮಾಡುತ್ತಿದ್ದರು ಎನ್ನುವುದು ಅರಿವಾಗುತ್ತಿದೆ. ರಸವನ್ನು ಮನಃಪೂರ್ತಿಯಾಗಿ ಅನುಭವಿಸುವುದನ್ನು ತಿಳಿಸಿಕೊಟ್ಟರು. ಅನೇಕ ಬಾರಿ ಮನಸ್ಸಿಗೆ ಬೇಸರವಾದಾಗ, ಮನಸ್ಸು ಒತ್ತಡದಲ್ಲಿದ್ದಾಗ ಯೋಚನೆಯನ್ನು ಬೇರೆಡೆಗೆ ಹರಿಸಿ ಮನಸ್ಸು ಹಗುರ ಮಾಡಿಕೊಳ್ಳಲು ಪುಸ್ತಕಗಳು ಸಹಾಯಕ್ಕೆ ಒದಗುತ್ತಿದ್ದವು. ಎಂ ಎಸ್ಸಿ ಕೊನೆಯ ಸೆಮಿಸ್ಟರ್ ಪರೀಕ್ಷೆಯ ಹಿಂದಿನ ದಿನ ಬರೆಮನೆಯ ಶಾಂತ ವಾತಾವರಣದಲ್ಲಿ ಕುಳಿತು ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯ ಓದು ಮುಗಿಸಿದ್ದು ಒಂದು ಅತ್ಯಂತ ರಸಮಯ ನೆನಪು. ಶಿಕ್ಷಣಕ್ಕಾಗಿ ಮನೆಯಿಂದ ದೂರ ಹೋದರೂ ಓದು ನಿಲ್ಲಲಿಲ್ಲ. ಕೈಯ್ಯಲ್ಲಿದ್ದ ಹಣದ ಬಹುಭಾಗ ಪುಸ್ತಕಗಳನ್ನು ಕೊಳ್ಳುವುದಕ್ಕೇ ಖರ್ಚಾಗಿ ಬಿಡುತ್ತಿತ್ತು. ಸಣ್ಣವನಿದ್ದಾಗ ಯೋಚನೆಗಳ ಮೇಲೆ ತುಂಬಾ ಪರಿಣಾಮ ಬೀರಿದ್ದು ಯಂಡಮೂರಿಯಾದರೆ ಅನಂತರ ಗಾಢವಾಗಿ ಕಾಡಿದ್ದು ಭೈರಪ್ಪ. ಕೋರೋನ ಸಮಯದಲ್ಲಿ ದುರ್ಗಸಿಂಹನ ಪಂಚತಂತ್ರ ಓದಿ ಮುಗಿಸಿದ್ದು ಹಳಗನ್ನಡದ ಅನೇಕ ಶಬ್ದಗಳ ಪರಿಚಯವಾಗಲು ಕಾರಣವಾಯಿತು. ಸದ್ಯಕ್ಕೆ ಶತಾವಧಾನಿ ಆರ್ ಗಣೇಶ್, ಡಿವಿಜಿ ಮುಂತಾದ ಮಹನೀಯರ ಪುಸ್ತಕಗಳನ್ನೋದುವ ಪರ್ವ.

ಇನ್ನೂ ಓದಬೇಕು ಅಂದುಕೊಂಡ ಪುಸ್ತಕಗಳ ಪಟ್ಟಿಯ ಉದ್ದ ನೋಡುವಾಗ ಗಾಬರಿಯಾಗುತ್ತದೆ. ಬಹುಶಃ ಈ ಒಂದು ಜನ್ಮ ಸಾಲದೇನೋ. ಅದರಲ್ಲೂ ಕೈಯಲ್ಲಿ ಮೊಬೈಲ್ ಬಂದಮೇಲೆ ಈ ಸಂಶಯ ಸಕಾರಣವಾದದ್ದು ಅನಿಸುತ್ತಿದೆ.

-ಉಮಾಶಂಕರ ಕೇಳತ್ತಾಯ