Saturday, November 26, 2022

ನದಿ ಮತ್ತು ಕಾಡು


                                                                                   (ಚಿತ್ರ: ಉಮಾಶಂಕರ್ ಕೆ)

"ನದಿಯಾಗಬೇಕಿತ್ತು ನಾನು, ನಿನ್ನಂತೆ"
ಕಾಡೊರೆಯಿತು ಓಡುತ್ತಿದ್ದ ನದಿಗೆ,
"ನದಿಯಾಗಬೇಕಿತ್ತು ನಾನು, ನಿನ್ನಂತೆ
ಯಾವಾಗಲೂ ಓಡುತ್ತಾ
ನಿತ್ಯ ಹೊಸ ದೃಶ್ಯಗಳ ನೋಡುತ್ತಾ
ಸಾಗರವ ಸೇರುತ್ತಾ
ಇರಬೇಕಿತ್ತು ನಾನೂ, ಉತ್ಸಾಹದಿಂದ ಸಾಗುತ್ತಾ
ನೀರಾದ ಬೆಳಕಂತೆ ಹರಿಯುತ್ತಾ
ನಿರಂತರ ಅಲೆಯುತ್ತಾ..."

"ಆದರೆ ನಾನು!? ಕೇವಲ ಸೆರೆಯಾಳು
ಬಂಧಿಸಲ್ಪಟ್ಟಿದ್ದೇನೆ ಭುವಿಗೆ,
ಬೆಳೆದು ಹಳತಾಗುತ್ತೇನೆ ನಾನು ಮೌನದಲ್ಲಿ;
ಅದರಲ್ಲೇ ನನ್ನ ಜೀವನ,
ನಿಶ್ಶಬ್ದದಲ್ಲೇ ಲೀನವಾಗುತ್ತೇನೆ ನಾನು.
ವರುಷಗಳ ನಂತರ ನನ್ನದೇನೂ ಉಳಿಯುವುದಿಲ್ಲ;
ಇಲ್ಲ! ಉಳಿಯುವುದು ಮುಷ್ಟಿ ತುಂಬ ಬೂದಿ"

"ಕಾಡಾಗಬೇಕಿತ್ತು ನಾನು, ನಿನ್ನಂತೆ"
ಅಲವತ್ತುಗೊಂಡಿತು ನದಿಯು
"ಕಾಡಾಗಬೇಕಿತ್ತು ನಾನು, ನಿನ್ನಂತೆ,
ಇರುತ್ತೀಯ ನೀನು ಅಂತರ್ಮುಖಿಯಂತೆ
ನಿದ್ದೆಯೋ? ಎಚ್ಚರವೋ?
ಸುತ್ತಲಿದೆ ಮಡುಗಟ್ಟಿದ ಮಹನ್ಮೌನ
ಆಹ್ಲಾದವಾಗಿದೆ ಅಗಾಧ ಏಕಾಂತತೆ
ಇದ್ದೀಯ ನೀನು ಹಸಿರು ವಜ್ರದಂತೆ,
ಬೆಳದಿಂಗಳಲ್ಲಿ ಬೆಳಗುತ್ತಾ
ಅರಿವಿಗೆಟುಕದ ರಹಸ್ಯವ ಪಿಸುಗುಡುತ್ತಾ.

ವರ್ಣಮಯ ವಸಂತದ ಮುಕುರ ನೀನು
ಪ್ರತಿಫಲಿಸುತ್ತದರ ಬೆಡಗು-ಅಂದಗಳನ್ನು
ಪ್ರತಿವರುಷವೂ ಹೊಸತನವೆ ನಿನ್ನ ಭವಿತವ್ಯ
ಪ್ರೇಮಿಗಳಿಗೆ ನೀನೊಂದು ನೆರಳಿನಾಶ್ರಯ.
ನನ್ನನ್ನು ನೋಡು! ಯಾವಾಗಲೂ ಓಡುತ್ತಾ
ನನ್ನಿಂದಲೂ ದೂರ, ಬಹಳಷ್ಟು ದೂರ
ಓಟ, ಅಗಾಧ ಓಟ, ದಿಗ್ಭ್ರಮೆಯ ಅಲೆದಾಟ
ಸಿಕ್ಕಿದ್ದು ಏನಿಲ್ಲ ಅರ್ಥವಿಲ್ಲದೀ ಓಟದಿಂದ
ಕನಸಾಯಿತಿನ್ನೆಂದು ಅನಂತ ಶಾಂತಿ
ಛೇ! ಕಾಡಾಗಬೇಕಿತ್ತು ನಾನು ನಿನ್ನಂತೆ"

ತಿಳಿಯಲಾರವು ಇನ್ನೊಬ್ಬರ ಮನದ ಭಾವಗಳು
ಕೇಳುವವರಾರು ಅವನ ಅಸ್ತಿತ್ವ ನಿಜವೇ
ಇಲ್ಲಾ, ಅವನೊಂದು ನೆರಳೇ?
ನಸುಗತ್ತಲಲಿ ಗುರಿಯಿಲ್ಲದೇ
ನಡೆಯುತ್ತದ್ದವನೊಬ್ಬ ತನ್ನನ್ನು
ತಾನೇ ಕೇಳಿಕೊಂಡ- "ನಾನು ಯಾರು?
ನದಿಯೇ? ಕಾಡೇ? ಇಲ್ಲಾ ಇವೆರಡೂ?
ನದಿ ಹಾಗೂ ಕಾಡು?
ನದಿ ಮತ್ತು ಕಾಡು.


                                                                                            ಮೂಲ: ಜಲಾಲುದ್ದೀನ್ ರೂಮಿ
                                                                                            ಅನುವಾದ: ಉಮಾಶಂಕರ್. ಕೆ

ಒಂದಾನೊಂದು ಕಾಲದಲ್ಲಿ...

 

                                                                                                         (ಚಿತ್ರ: ಉಮಾಶಂಕರ್ ಕೆ)

ಒಂದಾನೊಂದು ಕಾಲದಲ್ಲಿ, ಕಂದಾ,
ಜನರು ಹೃದಯಪೂರ್ವಕವಾಗಿ ನಗುತ್ತಿದ್ದರು,
ಅವರ ಕಣ್ಣುಗಳು ಮಿನುಗುತ್ತಿದ್ದವು.
ಆದರೆ ಈಗ? ಅವರೆಲ್ಲಾ ಬರೇ
ಹಲ್ಲುಗಳಿಂದ ನಗುತ್ತಿದ್ದಾರೆ,
ಅವರ ಮಂಜುಗಡ್ಡೆಯಂತಹ ಕಣ್ಣುಗಳು
ನನ್ನ ನೆರಳಿನ ಹಿಂದೆ ಏನನ್ನೋ ಶೋಧಿಸುತ್ತಿರುತ್ತವೆ.

ಅದೊಂದು ಕಾಲವಿತ್ತು, ಕಂದಾ,
ಜನರು ಹಸ್ತಲಾಘವದೊಂದಿಗೆ
ಹೃದಯವನ್ನೂ ಸೇರಿಸುತ್ತಿದ್ದರು.
ಈಗ ಆ ಕಾಲ ಮುಗಿದುಹೋಯಿತು..
ಅವರೆಲ್ಲಾ ಹೃದಯಹೀನವಾಗಿ
ಹಸ್ತಲಾಘವ ಮಾಡುತ್ತಿದ್ದಾರೆ; ಮಾತ್ರವಲ್ಲ,
ಅವರ ಎಡಗೈ ನನ್ನ ಖಾಲಿ ಜೇಬುಗಳನ್ನು ತಡವುತ್ತಿರುತ್ತದೆ.

"ಇದು ನಿಮ್ಮ ಮನೆಯೆಂದೇ ತಿಳಿಯಿರಿ"
"ಇನ್ನೊಮ್ಮೆ ಬರಲೇಬೇಕು"ಎಂದೆಲ್ಲಾ ಹೇಳುತ್ತಾರೆ.
ಹಾಗೆಂದು ನಾನು ಒಂದೆರಡು ಸಲ ಹೋದರೆ
ಮೂರನೇ ಬಾರಿ ಅವರ ಮನೆಬಾಗಿಲು
ನನ್ನ ಪಾಲಿಗೆ ಮುಚ್ಚಿರುತ್ತದೆ..

ಇವರಿಂದೆಲ್ಲಾ ನಾನು ತುಂಬಾ ಕಲಿತೆ ಕಂದಾ..
ಅನೇಕ ಮುಖವಾಡಗಳನ್ನು ತೊಡುವುದನ್ನು ಕಲಿತೆ,
ಅವುಗಳನ್ನು ಬಟ್ಟೆಗಳಂತೆ
ಬದಲಾಯಿಸುವುದನ್ನು ಕಲಿತೆ,
ಮನೆಗೊಂದು ಮುಖವಾಡ,
ಆಫೀಸಿಗೊಂದು ಮುಖವಾಡ,
ದಾರಿಯಲ್ಲೊಂದು, ಅತಿಥಿಯಾಗಿರುವಾಗ ಇನ್ನೊಂದು,
ಪಾರ್ಟಿಗಳಲ್ಲಿ ಮತ್ತೊಂದು.. ಹೀಗೆ..
ಒಂದು ನಿಗದಿತ ನಗುವನ್ನು ಮುಖದಲ್ಲಿ
ಬರಿಸಿಕೊಳ್ಳುವುದನ್ನು ಕಲಿತೆ,
ಅಷ್ಟೇ ಅಲ್ಲ ಮಗೂ.. ಬರೇ ಹಲ್ಲುಗಳಿಂದ
ನಗುವುದನ್ನು ಕಲಿತೆ,
ಹೃದಯರಹಿತವಾಗಿ ಷೇಕ್ ಹ್ಯಾಂಡ್
ಮಾಡುವುದನ್ನು ಕಲಿತೆ,
ಮಾತ್ರವಲ್ಲ, 'ಅಬ್ಬಾ! ಪಾರಾದೆ' ಎಂದುಕೊಳ್ಳುತ್ತಾ
'ಶುಭವಿದಾಯ'.ಹೇಳುವುದನ್ನೂ ಕಲಿತೆ.
ಸಂತಸವಾಗದಿದ್ದರೂ "ನಿಮ್ಮನ್ನು
ಭೇಟಿಯಾದದ್ದು ತುಂಬಾ ಸಂತೋಷ" ಎನ್ನಲು ಕಲಿತೆ,
ಮಾತೆಲ್ಲಾ ಕೇಳಿ ಸಾಕಾದಮೇಲೂ
"ನಿಮ್ಮಲ್ಲಿ ಮಾತಾಡುವುದೆಂದರೆ ಖುಷಿಯ ವಿಚಾರ"
ಎನ್ನಲು ಕಲಿ
ತೆ.


ಆದರೆ ದಯವಿಟ್ಟು ನನ್ನನ್ನು ನಂಬು ಕಂದಾ..
ನಿನ್ನಂತಿರುವಾಗ ನಾನು ಹೇಗಿದ್ದೆನೋ ಮತ್ತೆ
ಹಾಗಾಗಬೇಕೆಂದುಕೊಂಡಿದ್ದೇನೆ.
ಈ ಭಾವನಾರಹಿತ ವಿಷಯಗಳನ್ನೆಲ್ಲಾ
ಮರೆಯಬೇಕೆಂದಿದೆ.
ನಗುವುದನ್ನು ಮತ್ತೆ
ಹೊಸದಾಗಿ ಕಲಿಯಬೇಕೆಂದಿದೆ ಕಂದಾ..
ಯಾಕೆ ಗೊತ್ತಾ..?
ನಾನು ಕನ್ನಡಿಯೆದುರು ನಿಂತು ನಕ್ಕರೆ ನನ್ನ
ಹಲ್ಲುಗಳೆಲ್ಲಾ ಹಾವಿನ ದಂತಗಳಂತೆ ಕಾಣುತ್ತವೆ ಮಗೂ..

ಆದ್ದರಿಂದ ಹೇಗೆ ನಗುವುದೆಂದು ನನಗೆ
ಕಲಿಸುತ್ತೀಯಾ...?
ನಾನು ನಿನ್ನಂತಿರುವಾಗ ಹೇಗೆ ನಗುತ್ತಿದ್ದೆನೆಂಬುದನ್ನು
ಹೇಳಿಕೊಡುತ್ತೀಯಾ..? ■

ಗೇಬ್ರಿಯೆಲ್ ಓಕಾರಾ ಬರೆದ ಸುಪ್ರಸಿದ್ಧ ಕವನ 'Once upon a time' ನ ಭಾವಾನುವಾದ.
                                                                                     
                                                                                                        ಮೂಲ: ಗೇಬ್ರಿಯೆಲ್ ಒಕಾರಾ
                                                                                                        ಅನುವಾದ: ಉಮಾಶಂಕರ್ ಕೆ

Thursday, November 10, 2022

ಕುಲನಾಮದ ಕಥೆ

 "ಕೇಳತ್ತಾಯರೇ... ನಮಸ್ಕಾರ!"- ಇದು ನಮ್ಮಪ್ಪನನ್ನು ಕಂಡಾಗ ಪರಿಚಯಸ್ಥರು ಮಾತಿಗಾರಂಭಿಸುವ ರೀತಿ.

ಮಧ್ಯಾಹ್ನದೂಟಕ್ಕೆ ನಮ್ಮಲ್ಲಿಗೆ ಬರುವವರೊಬ್ಬರು "ಕೇಳತ್ತಾಯರೇ..‌. ಏನು ಮಾಡ್ತಾಯಿದ್ದೀರಿ?" ಎಂದು ಕೇಳುತ್ತಲೇ ಮನೆಯೊಳಗೆ ಬರುವುದು.

ನಮ್ಮ ಸಂಗೀತಗುರುಗಳಾಗಲೀ, ಅವರ ವಿದ್ವತ್ ಶಿಷ್ಯವರ್ಗವಾಗಲೀ ಎಲ್ಲರೂ ನಮ್ಮಪ್ಪನನ್ನು ಸಂಬೋಧಿಸುವುದು "ಕೇಳತ್ತಾಯರೇ" ಎಂದು. ನಾನು ಅವರಿಗೆಲ್ಲಾ 'ಕೇಳತ್ತಾಯರ ಮಗ'!.

ಅಪ್ಪ, ನಿವೃತ್ತರಾಗುವುದಕ್ಕಿಂತ ಮುಂಚೆ ಅವರು ಕೆಲಸ ಮಾಡುತ್ತಿದ್ದ ಕಛೇರಿಯಲ್ಲಿ 'ಕೇಳತ್ತಾಯರು' ಎಂದೇ ಪ್ರಸಿದ್ಧ. ಅವರ ನಿಜನಾಮಧೇಯವನ್ನು ಮರೆತವರೂ 'ಕೇಳತ್ತಾಯರು' ಎಂಬುದನ್ನು ನೆನಪಿನಲ್ಲಿರಿಸಿಕೊಂಡಿರುತ್ತಾರೆ.

ಹಾಗಿದ್ದರೆ ಈ "ಕೇಳತ್ತಾಯ" ಅಂದರೇನು? ಎಂದು ನಿಮಗೆಲ್ಲಾ ಪ್ರಶ್ನೆ ಹುಟ್ಟಬಹುದು.

ಉತ್ತರ ಹೇಳಿಯೇಬಿಡುತ್ತೇನೆ ಕೇಳಿ.

ಶಿವಳ್ಳಿ ಬ್ರಾಹ್ಮಣರ ಸುಮಾರು ೧೨೦ ಕುಲನಾಮಗಳಲ್ಲಿ ಈ 'ಕೇಳತ್ತಾಯ'ವೂ ಒಂದು. ಶಿವಳ್ಳಿ ತುಳುವಿನಲ್ಲಿ 'ಕೇಳತ್ತಾಯ' ಎಂದರೆ 'ಕೇಳ ಎಂಬ ಊರಿನವನು' ಎಂದರ್ಥ. ಮೂಡುಬಿದರೆಯ ವೇಣೂರಿನ ಸಮೀಪ ಕೇಳದ ಪೇಟೆ ಎಂಬ ಪುಟ್ಟ ಗ್ರಾಮವಿದೆ. ಅಲ್ಲಿ ನಮ್ಮ ಪೂರ್ವಜರು ನೆಲೆಸಿದ್ದರಂತೆ. ಅಲ್ಲಿ ಈಗೊಂದು ಚೊಕ್ಕವಾದ ಪಂಚಲಿಂಗೇಶ್ವರನ ಗುಡಿಯಿದೆ. ಈ ಕೇಳ ಗ್ರಾಮದಲ್ಲಿ ನಮ್ಮ ಹಿಂದಿನವರು ತಳವೂರಿದ್ದುದರಿಂದಲೇ ನಮ್ಮ ವಂಶಕ್ಕೆ ಕೇಳತ್ತಾಯ ಎಂಬ ಹೆಸರು ಬಂದುದು. ಇದನ್ನೇ ಹಿಡಿದುಕೊಂಡು ನಮ್ಮನ್ನು ಹಾಸ್ಯ ಮಾಡಿದವರೂ ಇದ್ದಾರೆ: "ನಿಮ್ಮೊಂದಿಗೆ ಏನನ್ನು ಮಾತನಾಡುವುದಯ್ಯಾ! ಎಷ್ಟಾದರೂ ನೀವು ಕೇಳದವರಲ್ಲವೇ?" ಅಂತ. ಹಾಗಾಗಿ ಕೇಳ ಎಂಬ ಊರಿನವರಾದ ನಾವು ಯಾರ ಮಾತನ್ನೂ ಕೇಳದವರು ಎಂಬ ಪಟ್ಟವನ್ನೂ ಗಳಿಸಿಕೊಂಡಿದ್ದೇವೆ!!. ಅದಿರಲಿ. ಕೇಳದ ಗ್ರಾಮದಲ್ಲಿದ್ದ ನಮ್ಮ ವಂಶಸ್ಥರು ಕಾರಣಾಂತರಗಳಿಂದ ಬೇರೆ ಕಡೆ ಗುಳೆ ಹೋದರಂತೆ. ಅಂತೂ ಸದ್ಯಕ್ಕೆ ನಮಗೆ ಗೊತ್ತಿರುವಂತೆ ಕೇಳತ್ತಾಯ ಕುಟುಂಬದ ಗಂಡಸರು ನಾನು,ನನ್ನಪ್ಪ ಬಿಟ್ಟರೆ ಬೇರಾರೂ ಇಡೀ ಭೂಮಂಡಲದಲ್ಲೆಲ್ಲೂ ಇಲ್ಲ. ಅಂದ ಹಾಗೆ ಇದೆಲ್ಲಾ ಏಕೆ ನೆನಪಾಯಿತೆಂದರೆ ನಾನು ಇತ್ತೀಚೆಗೆ, ಅಂದರೆ ಎರಡು-ಮೂರು ವಾರಗಳ ಹಿಂದೆ ಮೊತ್ತಮೊದಲಬಾರಿ ಕೇಳ ಗ್ರಾಮಕ್ಕೆ ಹೋಗಿದ್ದೆ. ಕ್ಯಾಮೆರಾ ತೆಗೆದುಕೊಂಡಿದ್ದೆನೆಂದು ಬೇರೆ ಹೇಳಬೇಕಾಗಿಲ್ಲ ತಾನೇ! ಹಾಗೇ ದೇವಾಲಯದೆದುರಿನ ಹೂದೋಟದಲ್ಲಿ ತಿರುಗುತ್ತಿರಬೇಕಾದರೆ ಸಿಕ್ಕಿದ ನೇರಳೆ ಸೂರಕ್ಕಿ ಇಲ್ಲಿದೆ ವೀಕ್ಷಿಸಿ.. 


ಈ ಫೊಟೋ ತೋರಿಸುವುದಕ್ಕಾಗಿ ಇಷ್ಟೆಲ್ಲಾ ಪೀಠಿಕೆ ಹಾಕಬೇಕಾಯಿತು ನೋಡಿ!.


                                                                                                    (ಚಿತ್ರ: ಉಮಾಶಂಕರ ಕೇಳತ್ತಾಯ)

Monday, November 7, 2022

ಅಂತರ

 

                                                                                                                 (ಚಿತ್ರಕೃಪೆ: ಅಂತರ್ಜಾಲ)

ಅಮರುಕ ಕವಿಯ ಅಮರುಶತಕದ ಪದ್ಯವೊಂದರ ಭಾವಾನುವಾದ, ಮಲ್ಲಿಕಾಮಾಲೆಯಲ್ಲಿ:

ಅಂದು ದೇಹಗಳೊಂದೆಯೆನ್ನುವಭಿನ್ನಭಾವವದೀರ್ವರೊಳ್|
ಕುಂದಲಾಶೆಗಳೆನ್ನೊಳಾಗಲೆ ನೀನು ನಲ್ಲನು ನಾಂ ಪ್ರಿಯೇ||
ಇಂದು ನಾವ್ಗಳು ಗಂಡಹೆಂಡಿರು ಬೇರೆಯೇನನು ಪೇಳ್ವೆನೋ|
ಕಂದಿದೆನ್ನಯ ಪ್ರಾಣದೋಳಿಯ ವಜ್ರಗಾಢತೆಯೀ ಫಲಂ||

[ಮೊದಲು ನಾವಿಬ್ಬರೂ ಒಂದೇ ದೇಹವೇನೋ ಎಂಬಷ್ಟು ಆತ್ಮೀಯರಾಗಿದ್ದೆವು. ಅನಂತರ ನೀನು ಪ್ರಿಯತಮ, ನಾನು ಹತಾಶಳಾದ ಪ್ರಣಯಿನಿಯಾದೆ. ಈಗ ನೀನು ಪತಿ, ನಾನು ಪತ್ನಿ ಎಂಬುದಷ್ಟೇ ಉಳಿದಿದೆ. ನಾನು ವಜ್ರದಂತೆ ಕಠಿಣವಾದುದರಿಂದ ಇದನ್ನು ಇನ್ನೂ ಅನುಭವಿಸುತ್ತಿದ್ದೇನೆ. (ಸಂಬಂಧದಿಂದ ಹತ್ತಿರವಾಗುತ್ತಾ ಬಂದರೂ ಮಾನಸಿಕವಾಗಿ ಅಂತರ ಹೆಚ್ಚುತ್ತಿದೆ.)]

ಮೂಲ (ಶಿಖರಿಣೀ): ತಥಾಭೂದಸ್ಮಾಕಂ ಪ್ರಥಮಮವಿಭಿನ್ನಾ ತನುರಿಯಂ
ತತೋ ನು ತ್ವಂ ಪ್ರೇಯಾಮಹಮಪಿ ಹತಾಶಾ ಪ್ರಿಯತಮಾ|
ಇದಾನೀಂ ನಾಥಸ್ತ್ವಂ ವಯಮಪಿ ಕಲತ್ರಂ ಕಿಮಪರಂ
ಮಯಾಪ್ತಂ ಪ್ರಾಣಾನಾಂ ಕುಲಿಶಕಠಿನಾನಾಂ ಫಲಮಿದಂ||

                                                                                                                            -ಉಮಾಶಂಕರ್ ಕೆ