"ಕೇಳತ್ತಾಯರೇ... ನಮಸ್ಕಾರ!"- ಇದು ನಮ್ಮಪ್ಪನನ್ನು ಕಂಡಾಗ ಪರಿಚಯಸ್ಥರು ಮಾತಿಗಾರಂಭಿಸುವ ರೀತಿ.
ಮಧ್ಯಾಹ್ನದೂಟಕ್ಕೆ ನಮ್ಮಲ್ಲಿಗೆ ಬರುವವರೊಬ್ಬರು "ಕೇಳತ್ತಾಯರೇ... ಏನು ಮಾಡ್ತಾಯಿದ್ದೀರಿ?" ಎಂದು ಕೇಳುತ್ತಲೇ ಮನೆಯೊಳಗೆ ಬರುವುದು.
ನಮ್ಮ ಸಂಗೀತಗುರುಗಳಾಗಲೀ, ಅವರ ವಿದ್ವತ್ ಶಿಷ್ಯವರ್ಗವಾಗಲೀ ಎಲ್ಲರೂ ನಮ್ಮಪ್ಪನನ್ನು ಸಂಬೋಧಿಸುವುದು "ಕೇಳತ್ತಾಯರೇ" ಎಂದು. ನಾನು ಅವರಿಗೆಲ್ಲಾ 'ಕೇಳತ್ತಾಯರ ಮಗ'!.
ಅಪ್ಪ, ನಿವೃತ್ತರಾಗುವುದಕ್ಕಿಂತ ಮುಂಚೆ ಅವರು ಕೆಲಸ ಮಾಡುತ್ತಿದ್ದ ಕಛೇರಿಯಲ್ಲಿ 'ಕೇಳತ್ತಾಯರು' ಎಂದೇ ಪ್ರಸಿದ್ಧ. ಅವರ ನಿಜನಾಮಧೇಯವನ್ನು ಮರೆತವರೂ 'ಕೇಳತ್ತಾಯರು' ಎಂಬುದನ್ನು ನೆನಪಿನಲ್ಲಿರಿಸಿಕೊಂಡಿರುತ್ತಾರೆ.
ಹಾಗಿದ್ದರೆ ಈ "ಕೇಳತ್ತಾಯ" ಅಂದರೇನು? ಎಂದು ನಿಮಗೆಲ್ಲಾ ಪ್ರಶ್ನೆ ಹುಟ್ಟಬಹುದು.
ಉತ್ತರ ಹೇಳಿಯೇಬಿಡುತ್ತೇನೆ ಕೇಳಿ.
ಶಿವಳ್ಳಿ ಬ್ರಾಹ್ಮಣರ ಸುಮಾರು ೧೨೦ ಕುಲನಾಮಗಳಲ್ಲಿ ಈ 'ಕೇಳತ್ತಾಯ'ವೂ ಒಂದು. ಶಿವಳ್ಳಿ ತುಳುವಿನಲ್ಲಿ 'ಕೇಳತ್ತಾಯ' ಎಂದರೆ 'ಕೇಳ ಎಂಬ ಊರಿನವನು' ಎಂದರ್ಥ. ಮೂಡುಬಿದರೆಯ ವೇಣೂರಿನ ಸಮೀಪ ಕೇಳದ ಪೇಟೆ ಎಂಬ ಪುಟ್ಟ ಗ್ರಾಮವಿದೆ. ಅಲ್ಲಿ ನಮ್ಮ ಪೂರ್ವಜರು ನೆಲೆಸಿದ್ದರಂತೆ. ಅಲ್ಲಿ ಈಗೊಂದು ಚೊಕ್ಕವಾದ ಪಂಚಲಿಂಗೇಶ್ವರನ ಗುಡಿಯಿದೆ. ಈ ಕೇಳ ಗ್ರಾಮದಲ್ಲಿ ನಮ್ಮ ಹಿಂದಿನವರು ತಳವೂರಿದ್ದುದರಿಂದಲೇ ನಮ್ಮ ವಂಶಕ್ಕೆ ಕೇಳತ್ತಾಯ ಎಂಬ ಹೆಸರು ಬಂದುದು. ಇದನ್ನೇ ಹಿಡಿದುಕೊಂಡು ನಮ್ಮನ್ನು ಹಾಸ್ಯ ಮಾಡಿದವರೂ ಇದ್ದಾರೆ: "ನಿಮ್ಮೊಂದಿಗೆ ಏನನ್ನು ಮಾತನಾಡುವುದಯ್ಯಾ! ಎಷ್ಟಾದರೂ ನೀವು ಕೇಳದವರಲ್ಲವೇ?" ಅಂತ. ಹಾಗಾಗಿ ಕೇಳ ಎಂಬ ಊರಿನವರಾದ ನಾವು ಯಾರ ಮಾತನ್ನೂ ಕೇಳದವರು ಎಂಬ ಪಟ್ಟವನ್ನೂ ಗಳಿಸಿಕೊಂಡಿದ್ದೇವೆ!!. ಅದಿರಲಿ. ಕೇಳದ ಗ್ರಾಮದಲ್ಲಿದ್ದ ನಮ್ಮ ವಂಶಸ್ಥರು ಕಾರಣಾಂತರಗಳಿಂದ ಬೇರೆ ಕಡೆ ಗುಳೆ ಹೋದರಂತೆ. ಅಂತೂ ಸದ್ಯಕ್ಕೆ ನಮಗೆ ಗೊತ್ತಿರುವಂತೆ ಕೇಳತ್ತಾಯ ಕುಟುಂಬದ ಗಂಡಸರು ನಾನು,ನನ್ನಪ್ಪ ಬಿಟ್ಟರೆ ಬೇರಾರೂ ಇಡೀ ಭೂಮಂಡಲದಲ್ಲೆಲ್ಲೂ ಇಲ್ಲ. ಅಂದ ಹಾಗೆ ಇದೆಲ್ಲಾ ಏಕೆ ನೆನಪಾಯಿತೆಂದರೆ ನಾನು ಇತ್ತೀಚೆಗೆ, ಅಂದರೆ ಎರಡು-ಮೂರು ವಾರಗಳ ಹಿಂದೆ ಮೊತ್ತಮೊದಲಬಾರಿ ಕೇಳ ಗ್ರಾಮಕ್ಕೆ ಹೋಗಿದ್ದೆ. ಕ್ಯಾಮೆರಾ ತೆಗೆದುಕೊಂಡಿದ್ದೆನೆಂದು ಬೇರೆ ಹೇಳಬೇಕಾಗಿಲ್ಲ ತಾನೇ! ಹಾಗೇ ದೇವಾಲಯದೆದುರಿನ ಹೂದೋಟದಲ್ಲಿ ತಿರುಗುತ್ತಿರಬೇಕಾದರೆ ಸಿಕ್ಕಿದ ನೇರಳೆ ಸೂರಕ್ಕಿ ಇಲ್ಲಿದೆ ವೀಕ್ಷಿಸಿ..
ಈ ಫೊಟೋ ತೋರಿಸುವುದಕ್ಕಾಗಿ ಇಷ್ಟೆಲ್ಲಾ ಪೀಠಿಕೆ ಹಾಕಬೇಕಾಯಿತು ನೋಡಿ!.
(ಚಿತ್ರ: ಉಮಾಶಂಕರ ಕೇಳತ್ತಾಯ)
No comments:
Post a Comment